ಬಿಡಬ್ಲುಎಫ್ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ ಸಿಂಧು ಐತಿಹಾಸಿಕ ಸಾಧನೆ

Update: 2018-12-16 06:57 GMT

ಗ್ವಾಂಗ್‌ಝೌ(ಚೀನಾ), 16: ವರ್ಷಾಂತ್ಯದಲ್ಲಿ ನಡೆಯುವ ಬಿಡಬ್ಲು ಎಫ್ ವರ್ಲ್ಡ್ ಟೂರ್ ಫೈನಲ್ಸ್ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಎತ್ತಿ ಹಿಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ವಂಚಿತವಾಗಿದ್ದ ಸಿಂಧು ಈ ಬಾರಿ ತನ್ನ ತಪ್ಪನ್ನು ತಿದ್ದುಕೊಂಡು ಪ್ರತಿಷ್ಠಿತ ಪ್ರಶಸ್ತಿ ಎತ್ತಿ ಹಿಡಿದು ವರ್ಷವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದರು.

ರವಿವಾರ ಅತ್ಯಂತ ಪೈಪೋಟಿಯಿಂದ ಸಾಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.6ನೇ ಆಟಗಾರ್ತಿ ಸಿಂಧು ಜಪಾನ್‌ನ ನೊರೊಮಿ ಒಕುಹರಾರನ್ನು 21-19, 21-17 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ಬಿಡಬ್ಲುಎಫ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

 23ರ ಹರೆಯದ ಸಿಂಧು ಈ ವರ್ಷ ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ಸಹಿತ ಐದು ವಿವಿಧ ಟೂರ್ನಿಗಳಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ವಂಚಿತರಾಗಿದ್ದರು. ಇದೀಗ ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಂಡಿರುವ ಸಿಂಧು ವೃತ್ತಿಜೀವನದ 14ನೇ ಟ್ರೋಫಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News