ಛತ್ತೀಸ್‌ಗಡದ ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್: ನಾಳೆ ಪ್ರಮಾಣ ವಚನ ಸ್ವೀಕಾರ

Update: 2018-12-16 16:51 GMT

 ರಾಯಪುರ, ಡಿ. 16: ಕಾಂಗ್ರೆಸ್‌ನ ಹಿರಿಯ ನಾಯಕ ಭೂಪೇಶ್ ಬಘೇಲ್ ಅವರನ್ನು ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯನ್ನಾಗಿ ರವಿವಾರ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಪಕ್ಷದ ಉನ್ನತ ನಾಯಕತ್ವದಲ್ಲಿ ತೀವ್ರ ಚರ್ಚೆ ನಡೆದ ದಿನದ ಬಳಿಕ ಛತ್ತೀಸ್‌ಗಡದ ಮುಖ್ಯಮಂತ್ರಿ ಯಾರೆಂಬ ನಿಗೂಢತೆಗೆ ತೆರೆ ಬಿದ್ದಿದೆ.

ಇಲ್ಲಿ ನಡೆದ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯ ಬಳಿಕ ಕಾಂಗ್ರೆಸ್‌ನ ಕೇಂದ್ರ ಪರಿವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಈ ಘೋಷಣೆ ಮಾಡಿದರು.

ಸೋಮವಾರ ಸಂಜೆ 5 ಗಂಟೆಗೆ ಬಾೇಲ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ಇತರ ಸಚಿವರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.

ವಿಪಕ್ಷ ನಾಯಕ ಟಿ.ಎಸ್. ಸಿಂಗ್ ದೇವ್, ಕಾಂಗ್ರೆಸ್ ಒಬಿಸಿ ಘಟಕದ ವರಿಷ್ಠ ಹಾಗೂ ಲೋಕಸಭೆ ಸಂಸದ ತಾಮ್ರಧ್ವಜ್ ಸಾಹು, ಕೇಂದ್ರದ ಮಾಜಿ ಸಚಿವ ಚರಣ್ ದಾಸ್ ಮಹಂತಾ ಹಾಗೂ ಭೂಪೇಶ್ ಬಘೇಲ್ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮವಾಗಿ ಬಘೇಲ್ ಅವರನ್ನು ಆಯ್ಕೆ ಮಾಡಿದ್ದಾರೆ.

ನಾಲ್ಕು ಮಂದಿ ನಾಯಕರು ಪಕ್ಷಕ್ಕಾಗಿ ಸಮಾನವಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಸಮಾನರು. ಆದುದರಿಂದ ಇದು ಕಠಿಣ ನಿರ್ಧಾರವಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.

ನಾಲ್ವರು ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರು ಬಘೇಲ್ ಅವರನ್ನು ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಭೂಪೇಶ್ ಬಘೇಲ್ ಅವರನ್ನು ಎಲ್ಲ ಶಾಸಕರು ಸರ್ವಸಮ್ಮತವಾಗಿ ಆಯ್ಕೆ ಮಾಡಿದ ಬಳಿಕ ಶಾಸಕರಿಗೆ ಈ ವಿಷಯ ತಿಳಿಸಲಾಯಿತು ಎಂದು ಖರ್ಗೆ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ 15 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿರುವುದರಿಂದ ನಮ್ಮ ಮುಂದೆ ಹಲವು ಸವಾಲುಗಳು ಇವೆ. ನಾವು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಿದ್ದೇವೆ. ಬಘೇಲ್ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂಬ ಭರವಸೆ ನಮಗಿದೆ ಎಂದು ಖರ್ಗೆ ಹೇಳಿದರು. ಈ ನಡುವೆ ಪಕ್ಷದ ಟ್ವಿಟ್ಟರ್ ಹ್ಯಾಂಡಲ್, ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ನೂತನ ಸರಕಾರ ಸಮಾನತೆ, ಪಾರದರ್ಶಕತೆ, ಸಮಗ್ರತೆಯಿಂದ ಕಾರ್ಯ ನಿರ್ವಹಿಸಲಿದೆ. ರಾಜ್ಯದ ರೈತರ ಸಾಲ ಮನ್ನಾ ಮಾಡುವುದು ನೂತನ ಸರಕಾರದ ಮೊದಲ ಗುರಿ ಎಂದು ಹೇಳಿದೆ.

ಭೂಪೇಶ್ ಬಘೇಲ್

ಭೂಪೇಶ್ ಬಘೇಲ್ 1961 ಆಗಸ್ಟ್ 23ರಂದು ಛತ್ತೀಸ್‌ಗಡದಲ್ಲಿ ಜನಿಸಿದರು. ಕಳೆದ ಅಕ್ಟೋಬರ್ 24ರಿಂದ ಅವರು ಕಾಂಗ್ರೆಸ್‌ನ ವರಿಷ್ಠರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಅವರು ಪಠಾಣ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಬಘೇಲ್ ಅವರು 1980ರ ಆರಂಭದಲ್ಲಿ ಚಂದುಲಾಲ್ ಚಂದ್ರಾಕರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. 1994-95ರಲ್ಲಿ ಅವರು ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

1998ರಲ್ಲಿ ದಿಗ್ವಿಜಯ ಸಿಂಗ್ ಸಂಪುಟದಲ್ಲಿ ಅವರು ಸಾರ್ವಜನಿಕ ಸಮಸ್ಯೆ ಪರಿಹಾರ ಖಾತೆಯ ಸಹಾಯಕ ಸಚಿವರಾಗಿ ನಿಯೋಜಿತರಾಗಿದ್ದರು.

 ಛತ್ತೀಸ್‌ಗಡ ರೂಪುಗೊಂಡ ಬಳಿಕ ಅವರು 2003ರ ವರೆಗೆ ಕಂದಾಯ, ಸಾರ್ವಜನಿಕ ಆರೋಗ್ಯ ಹಾಗೂ ಪರಿಹಾರ ಕಾರ್ಯದ ಮೊದಲ ಸಚಿವರಾಗಿದ್ದರು. 2003ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ವಿಪಕ್ಷದ ಉಪ ನಾಯಕರಾಗಿದ್ದರು.

2008ರ ವಿಧಾನ ಸಭೆ ಚುನಾವಣೆಯಲ್ಲಿ ಅವರು ಪಠಾಣ್ ಕ್ಷೇತ್ರದಲ್ಲಿ ಸೋತಿದ್ದರು. 2004 ಹಾಗೂ 2009ರ ಸಂಸದೀಯ ಚುನಾವಣೆಯಲ್ಲಿ ಕೂಡ ಅವರು ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News