ಐಪಿಎಲ್ ಆಟಗಾರರ ಹರಾಜು: ವರುಣ್, ಜೈದೇವ್‌ಗೆ ಜಾಕ್‌ಪಾಟ್

Update: 2018-12-18 16:04 GMT

 ಜೈಪುರ, ಡಿ.18: 2019ರ ಐಪಿಎಲ್‌ಗಾಗಿ ‘ಪಿಂಕ್ ಸಿಟಿ’ ಖ್ಯಾತಿಯ ಜೈಪುರದಲ್ಲಿ ಮಂಗಳವಾರ ನಡೆದ ಆಟಗಾರರ ಹರಾಜಿನಲ್ಲಿ ತಮಿಳುನಾಡಿನ ಯುವ ಆಟಗಾರ ವರುಣ್ ಚಕ್ರವರ್ತಿ ಹಾಗೂ ಅನುಭವಿ ಆಟಗಾರ ಜೈದೇವ್ ಉನದ್ಕಟ್ ತಲಾ 8.4 ಕೋ.ರೂ.ಗೆ ಹರಾಜಾಗುವ ಮೂಲಕ ಭಾರತದ ದುಬಾರಿ ಆಟಗಾರರೆನಿಸಿಕೊಂಡರು. ಇಂಗ್ಲೆಂಡ್‌ನ ಸ್ಯಾಮ್ ಕರನ್ 7.2 ಕೋ.ರೂ.ಗೆ ಪಂಜಾಬ್ ಪಾಲಾದರು. ಕರನ್ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ವಿದೇಶದ ಆಟಗಾರ ಎನಿಸಿಕೊಂಡರು.

  ಇದೇ ವೇಳೆ, ಮುಂಬೈನ ಯುವ ಆಟಗಾರ ಶಿವಂ ದುಬೆ 5 ಕೋ.ರೂ.ಗೆ ಆರ್‌ಸಿಬಿ ತಂಡದ ತೆಕ್ಕೆಗೆ ಸೇರುವ ಮೂಲಕ ಅಚ್ಚರಿ ಮೂಡಿಸಿದರು. ಮುಂಬೈ ಆಲ್‌ರೌಂಡರ್ ದುಬೆ ಮುಂಬೈನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಪ್ರವೀಣ್ ತಾಂಬೆ ಎಸೆತದಲ್ಲಿ ಓವರ್‌ರೊಂದರಲ್ಲಿ 5 ಸಿಕ್ಸರ್ ಸಿಡಿಸಿದ್ದರು. ಇತ್ತೀಚೆಗೆ ಬರೋಡಾ ವಿರುದ್ಧ ರಣಜಿ ಟ್ರೋಫಿಯ ಕೊನೆಯ ದಿನದ ಪಂದ್ಯದಲ್ಲಿ ಇದೇ ಪ್ರದರ್ಶನ ಪುನರಾವರ್ತಿಸಿದ ದುಬೆ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಬೌಲಿಂಗ್‌ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ ಮಿಂಚಿದ್ದರು.

ವೇಗದ ಬೌಲರ್‌ಗಳಾದ ಮೋಹಿತ್ ಶರ್ಮಾ ಹಾಗೂ ಮುಹಮ್ಮದ್ ಶಮಿಗೆ ಮಂಗಳವಾರ ಜಾಕ್‌ಪಾಟ್ ಹೊಡೆದಿದೆ.ಹೊಸ ಮುಖ, ಚೆನ್ನೈನ ವಿಲಕ್ಷಣ ಸ್ಪಿನ್ನರ್ ವರುಣ್ ಚಕ್ರವರ್ತಿ 8.4 ಕೋ.ರೂ.ಗೆ ಪಂಜಾಬ್ ತಂಡಕ್ಕೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರಿಸಿದರು. 20 ಲಕ್ಷ ರೂ.ಮೂಲ ಬೆಲೆ ಹೊಂದಿದ್ದ ಲೆಗ್ ಸ್ಪಿನ್ನರ್ ಚಕ್ರವರ್ತಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮಧುರೈ ಪ್ಯಾಂಥರ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ವಿಜಯ್ ಹಝಾರೆ ಟ್ರೋಫಿ ಟೂರ್ನಿಯ 9 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದರು.

1.5 ಕೋ.ರೂ. ಮೂಲಬೆಲೆ ಹೊಂದಿದ್ದ ಎಡಗೈ ವೇಗದ ಬೌಲರ್ ಜೈದೇವ್ ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8.4 ಕೋ.ರೂ.ಗೆ ಹರಾಜಾಗಿದ್ದಾರೆ. ಕಳೆದ ಹರಾಜಿನಲ್ಲಿ ರಾಜಸ್ಥಾನ ತಂಡಕ್ಕೆ 11.5 ಕೋ.ರೂ.ಗೆ ಹರಾಜಾಗಿದ್ದ ಜೈದೇವ್‌ರನ್ನು ಆ ತಂಡ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈಗ ಮತ್ತೊಮ್ಮೆ ಸೇರಿಸಿಕೊಂಡಿದೆ. 2015ರ ವಿಶ್ವಕಪ್‌ನಲ್ಲಿ ಆಡಿದ್ದ ಮೋಹಿತ್ ಶರ್ಮಾ(ಮೂಲ ಬೆಲೆ 50 ಲಕ್ಷ)ಚೆನ್ನೈ ಸೂಪರ್ ಕಿಂಗ್ಸ್‌ಗೆ 5 ಕೋ.ರೂ.ಗೆ ಹಾಗೂ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯಲ್ಲಿ ಜೀವನಶ್ರೇಷ್ಠ ಬೌಲಿಂಗ್(6-56)ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮುಹಮ್ಮದ್ ಶಮಿ(1 ಕೋ.ರೂ.ಮೂಲ ಬೆಲೆ) ಪಂಜಾಬ್ ಫ್ರಾಂಚೈಸಿಗೆ 4.8 ಕೋ.ರೂ.ಗೆ ಬಿಕರಿಯಾದರು.

ಇನ್ನುಳಿದಂತೆ ಲಸಿತ್ ಮಾಲಿಂಗ ಹಾಗೂ ಇಶಾಂತ್ ಶರ್ಮಾ ಕ್ರಮವಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ತಂಡಗಳಿಗೆ 2 ಕೋ.ರೂ. ಹಾಗೂ 1.1 ಕೋ.ರೂ.ಗೆ ಮಾರಾಟವಾದರು.

2016ರ ಟಿ-20 ವಿಶ್ವಕಪ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿದ್ದ ವಿಂಡೀಸ್ ಆಲ್‌ರೌಂಡರ್ ಬ್ರಾತ್‌ವೇಟ್ 5 ಕೋ.ರೂ. ಗೆ ಕೆಕೆಆರ್ ತಂಡದ ಪಾಲಾದರು. ಆಲ್‌ರೌಂಡರ್ ಅಕ್ಷರ್ ಪಟೇಲ್ ತಲಾ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ಕೋ.ರೂ.ಗೆ ಮಾರಾಟವಾದರು.

  ವಿಂಡೀಸ್ ಯುವ ಆಟಗಾರ ಶಿಮ್ರನ್ ಹೆಟ್ಮೆಯರ್ ಖರೀದಿಸಲು ನಿರೀಕ್ಷೆಯಂತೆಯೇ ತೀವ್ರ ಪೈಪೋಟಿ ಕಂಡುಬಂದಿದ್ದು ಆರ್‌ಸಿಬಿ 4.2 ಕೋ.ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಹೆಟ್ಮೆಯರ್ ಇತ್ತೀಚೆಗೆ ಭಾರತ ಕ್ರಿಕೆಟ್ ಪ್ರವಾಸದ ವೇಳೆ ಗಮನಾರ್ಹ ಪ್ರದರ್ಶನ ನೀಡಿದ್ದರು.

ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ಸರ್ಫರಾಝ್ ಖಾನ್ ಈ ವರ್ಷ 25 ಲಕ್ಷ ರೂ.ಗೆ ಪಂಜಾಬ್ ತಂಡದ ಪಾಲಾದರು. ಇಂಗ್ಲೆಂಡ್ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೊವ್‌ರನ್ನು ಹೈದರಾಬಾದ್ ತಂಡ 2.2 ಕೋ.ರೂ.ಗೆ ಖರೀದಿಸಿದೆ. ಹೈದರಾಬಾದ್ ಸಹಾರನ್ನು 1.2 ಕೋ.ರೂ. ನೀಡಿ ಮತ್ತೊಮ್ಮೆ ಸೇರಿಸಿಕೊಂಡಿದೆ. ಭಾರತದ ಮಧ್ಯಮ ಕ್ರಮಾಂಕದ ಹನುಮ ವಿಹಾರಿ ಈ ವರ್ಷದ ಹರಾಜಿನಲ್ಲಿ ಬಿಕರಿಯಾದ ಮೊದಲ ಆಟಗಾರನಾಗಿದ್ದರು. ವಿಹಾರಿಯವರನ್ನು ಡೆಲ್ಲಿ ತಂಡ 2 ಕೋ.ರೂ. ನೀಡಿ ಖರೀದಿಸಿತು. ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಮೊದಲ ಸುತ್ತಿನ ಬಿಡ್‌ನಲ್ಲಿ ಮಾರಾಟವಾಗದೇ ಉಳಿದಿರುವ ಪ್ರಮುಖ ಆಟಗಾರನಾಗಿದ್ದಾರೆ. ಚೇತೇಶ್ವರ ಪೂಜಾರ, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ಕ್ರಿಸ್ ವೋಕ್ಸ್‌ರನ್ನು ಈತನಕ ಯಾರೂ ಖರೀದಿಸಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News