ನಟಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿದ್ದ ದಿಲೀಪ್ ಅರ್ಜಿ ತಿರಸ್ಕೃತ

Update: 2018-12-19 15:01 GMT

ತಿರುವನಂತಪುರಂ, ಡಿ.19: ತನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ದೂರಿರುವ ಮಲಯಾಳಂ ನಟ ದಿಲೀಪ್, ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಈಗಿನ ತನಿಖಾಧಿಕಾರಿ ನ್ಯಾಯೋಚಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಕೇರಳ ಪೊಲೀಸ್ ಇಲಾಖೆಯ ಹೊಸ ತಂಡ ತನಿಖೆ ನಡೆಸಬೇಕು. ಹೊಸ ತಂಡಕ್ಕೆ ತನಿಖೆ ಹಸ್ತಾಂತರಿಸದಿದ್ದರೆ ಸಿಬಿಐಗೆ ವಹಿಸಬೇಕು. ಕೆಲವು ಪೊಲೀಸ್ ಅಧಿಕಾರಿಗಳು ತನ್ನ ವಿರುದ್ಧ ಪುರಾವೆಗಳನ್ನು ರೂಪಿಸುತ್ತಿದ್ದಾರೆ ಎಂದು ದಿಲೀಪ್ ಅರ್ಜಿಯಲ್ಲಿ ತಿಳಿಸಿದ್ದರು.

ಫೆಬ್ರವರಿ 17ರಂದು ಮಲಯಾಳಂ ನಟಿಯೊಬ್ಬರನ್ನು ಅಪಹರಿಸಿದ ತಂಡವೊಂದು, ನಟಿಯ ಕಾರಿನಲ್ಲೇ ಎರಡು ಗಂಟೆ ಲೈಂಗಿಕ ದೌರ್ಜನ್ಯ ನಡೆಸಿದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಪಲ್ಸರ್ ಸುನಿ, ನಟ ದಿಲೀಪ್ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 85 ದಿನ ಜೈಲಿನಲ್ಲಿದ್ದ ದಿಲೀಪ್‌ರನ್ನು ಜುಲೈ 10ರಂದು ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News