×
Ad

ಪ್ರತಿಭಟನೆ: ಲೋಕಸಭೆ ಕಲಾಪ ಮುಂದೂಡಿಕೆ

Update: 2018-12-21 22:13 IST

ಹೊಸದಿಲ್ಲಿ, ಡಿ. 21: ವಿವಿಧ ವಿಷಯಗಳಿಗೆ ಸಂಬಂಧಿಸಿ ಎಐಎಡಿಎಂಕೆ, ಟಿಡಿಪಿ ಹಾಗೂ ಎಎಪಿ ಸದಸ್ಯರು ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಶುಕ್ರವಾರ ಬೆಳಗ್ಗೆ ಸುಮಾರು 50 ನಿಮಿಷಗಳ ಕಾಲ ಮುಂದೂಡಲಾಯಿತು.

ರಫೇಲ್ ಜೆಟ್ ಒಪ್ಪಂದ ಕುರಿತು ನಿರಂತರ ವಾಗ್ದಾಳಿ ನಡೆಸುತ್ತಿದ್ದ ಹಾಗೂ ಈ ವಿವಾದದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಲಿಲ್ಲ.

ರಫೇಲ್ ಒಪ್ಪಂದ, ಕಾವೇರಿ ವಿವಾದ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳು ಶುಕ್ರವಾರ ನಡೆದ 8ನೇ ಚಳಿಗಾಲದ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡಿದವು. ಗುರುವಾರ ಕಲಾಪ ಮುಂದೂಡಿಕೆಯ ಹೊರತಾಗಿಯೂ ಎರಡು ಮಸೂದೆಗಳು ಅಂಗೀಕಾರಗೊಂಡಿದ್ದವು.

ಸದನದ ಪ್ರಶ್ನೋತ್ತರ ವೇಳೆಯಲ್ಲಿ ಎಐಎಡಿಎಂಕೆ ಸದಸ್ಯರು ಕಾವೇರಿ ನದಿಗೆ ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿ ಪ್ರದರ್ಶನಾ ಫಲಕಗಳನ್ನು ಹಿಡಿದು ಸದನದ ಬಾವಿಗೆ ಇಳಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸುತ್ತಿದ್ದ ತೆಲುಗು ದೇಶಂ ಪಕ್ಷದ ಸದಸ್ಯರು ಇದರೊಂದಿಗೆ ಸೇರಿದರು.

ಎಐಎಡಿಎಂಕೆ ಹಾಗೂ ಟಿಡಿಪಿಯೊಂದಿಗೆ ಆಪ್‌ನ ಸದಸ್ಯರು ಕೂಡ ಸೇರಿದರು. ಆಪ್ ಕಾರ್ಯಕರ್ತರು ದಿಲ್ಲಿಯಲ್ಲಿ ಬೀಗಮುದ್ರೆ ಖಂಡಿಸಿ ಪ್ರದರ್ಶನಾ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಆಯುಷ್ ಸಚಿವಾಲಯದ ಬಗ್ಗೆ ಸಚಿವ ಶ್ರೀಪಾದ್ ನಾಯಕ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಂದರ್ಭ ಕೆಲವು ಸದಸ್ಯರು ಸದನದ ಬಾವಿಗೆ ಇಳಿದು ಕಲಾಪದಲ್ಲಿ ಕುಳಿತಿದ್ದ ಲೋಕಸಭೆಯ ಸೆಕ್ರೇಟರಿಯೇಟ್‌ನ ಅಧಿಕಾರಿಗಳ ಟೇಬಲ್‌ನಲ್ಲಿದ್ದ ಕಾಗದಗಳನ್ನು ಹರಿದೆಸೆದರು. ಟೇಬಲ್ ಸದನದ ಬಾವಿಯಲ್ಲಿ ಸ್ಪೀಕರ್ ಅವರ ಪೋಡಿಯಂನ ಸಮೀಪ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News