×
Ad

ಬಿಹಾರ: ಪಿಎನ್‌ಬಿ ಅಧಿಕಾರಿಯ ಅಪಹರಣ; ಹತ್ಯೆ

Update: 2018-12-22 23:45 IST

ಪಾಟ್ನ, ಡಿ.22: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ ಬ್ಯಾಂಕ್)ನ ಅಧಿಕಾರಿಯೊಬ್ಬರನ್ನು ಅಪಹರಿಸಿದ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಬಳಿಕ ಅವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಿಎನ್‌ಬಿಯ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಪಿ)ಯ ಉಸ್ತುವಾರಿ ಅಧಿಕಾರಿ ಪಿಂಟು ಸಿಂಗ್‌ರನ್ನು ಶುಕ್ರವಾರ ರಾತ್ರಿ 11 ಗಂಟೆಯ ವೇಳೆಗೆ ಅಮಾಸ್ ಬಳಿಯಿಂದ ಅಪಹರಿಸಲಾಗಿದೆ. ಶನಿವಾರ ಬೆಳಿಗ್ಗಿನ ಜಾವ ಸುಮಾರು 2 ಗಂಟೆಗೆ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸಿಂಗ್ ಅವರ ಹಣೆಯ ಭಾಗದಲ್ಲಿ ಆಳವಾದ ಗಾಯದ ಗುರುತು ಇತ್ತು ಎಂದು ಅಮಾಸ್ ಪೊಲೀಸ್ ಠಾಣೆಯ ಅಧಿಕಾರಿ ಶ್ಯಾಮಲಾಲ್ ಸರಾಹ್ ತಿಳಿಸಿದ್ದಾರೆ.

ಈ ಮಧ್ಯೆ, ಗುರುವಾರ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಉದ್ಯಮಿಯನ್ನು ಗುಂಜಾನ್ ಖೇಮ್ಕ ಎಂದು ಗುರುತಿಸಲಾಗಿದೆ. ಪಾಟ್ನದಲ್ಲಿ ಪ್ರಖ್ಯಾತ ಉದ್ಯಮಿಯಾಗಿರುವ ಗೋಪಾಲ್ ಖೇಮ್ಕರ ತಂದೆ ಗುಂಜಾನ್ ಪಾಟ್ನದ ಸಮೀಪವಿರುವ ಹಾಜಿಪುರದಲ್ಲಿರುವ ತನ್ನ ಫ್ಯಾಕ್ಟರಿಗೆ ತೆರಳುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿರುವಂತೆಯೇ ಬಿಹಾರದಲ್ಲಿ ಮತ್ತೊಂದು ಹತ್ಯೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದರ ದ್ಯೋತಕವಾಗಿದೆ ಎಂದು ವಿಪಕ್ಷಗಳು ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News