×
Ad

ಇಸ್ಲಾಮಾಬಾದ್: ಭಾರತದ ವಸತಿ ಸಂಕೀರ್ಣಕ್ಕೆ ಅನಿಲ ಪೂರೈಕೆ ನಿರಾಕರಿಸಿದ ಪಾಕ್

Update: 2018-12-23 09:21 IST

ಹೊಸದಿಲ್ಲಿ, ಡಿ. 23: ಇಸ್ಲಾಮಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಭಾರತೀಯರ ವಸತಿ ಸಂಕೀರ್ಣಕ್ಕೆ ಅನಿಲ ಪೂರೈಕೆ ಮಾಡಲು ಪಾಕಿಸ್ತಾನ ನಿರಾಕರಿಸಿದೆ.

ಪಾಕಿಸ್ತಾನದ ಹೈಕಮಿಷನರ್ ಸುಹೈಲ್ ಮುಹಮ್ಮದ್ ಅವರ ಕೊಲ್ಕತ್ತಾ ಭೇಟಿಗೆ ಭಾರತ ಸರ್ಕಾರ ಅವಕಾಶ ನಿರಾಕರಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರದ ಈ ಕ್ರಮ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಸುಹೈಲ್ ಮುಹಮ್ಮದ್ ಭೇಟಿಗೆ ಅವಕಾಶ ನಿರಾಕರಿಸಿದ್ದೇಕೆ ಎಂಬ ಬಗ್ಗೆ ಎರಡೂ ಸರ್ಕಾರಗಳು ಬಾಯಿಬಿಟ್ಟಿಲ್ಲ. ಆದರೆ ಭೇಟಿಗೆ ಅನುಮೋದನೆ ಕೋರುವುದು ವಿಳಂಬವಾದ್ದರಿಂದ ಅವಕಾಶ ನಿರಾಕರಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಭಾರತ ಹಾಗೂ ಪಾಕಿಸ್ತಾನದ ಹೈಕಮಿಷನರ್ ತಾವು ಕಾರ್ಯನಿರ್ವಹಿಸುವ ಪ್ರದೇಶದ ಅಂದರೆ ರಾಜಧಾನಿಯ ಹೊರಗೆ ಎಲ್ಲೇ ಭೇಟಿ ನೀಡಬೇಕಿದ್ದರೂ, ಅನುಮೋದನೆ ಪಡೆಯುವುದು ಅಗತ್ಯ. ಇಸ್ಲಾಮಾಬಾದ್‌ನಲ್ಲಿ ಭಾರತ ನಿರ್ಮಿಸಿದ ಹೊಸ ವಸತಿ ಸಂಕೀರ್ಣಕ್ಕೆ ಅನಿಲ ಪೂರೈಕೆ ಮಾಡಲು ವಿಳಂಬವಾಗುತ್ತಿರುವ ವಿಚಾರವನ್ನು ಭಾರತ ಪಾಕಿಸ್ತಾನ ಸರ್ಕಾರದ ಬಳಿ ಒಯ್ದಿದೆ. ಕಳೆದ ಒಂದು ತಿಂಗಳಿಂದ ಪದೇ ಪದೇ ಈ ವಿಚಾರವನ್ನು ಪಾಕಿಸ್ತಾನ ಹೈಕಮಿಷನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಂದೆ ಪ್ರಸ್ತಾವಿಸಲಾಗಿದೆ ಎಂದು ಹೇಳಿವೆ.

"ಹಲವು ಬಾರಿ ಈ ಬಗ್ಗೆ ಪ್ರಸ್ತಾವ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಮೂಲಗಳು ತಿಳಿಸಿದ್ದು, ಉಭಯ ದೇಶಗಳ ರಾಜಧಾನಿಯಲ್ಲಿ ರಾಜತಾಂತ್ರಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಪರಸ್ಪರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವಸತಿ ಸಂಕೀರ್ಣ ವಿವಾದ ಮಹತ್ವ ಪಡೆದುಕೊಂಡಿದೆ.

ನಿರ್ಮಾಣ ಹಂತದಲ್ಲಿದ್ದಾಗ ವಸತಿ ಸಂಕೀರ್ಣಕ್ಕೆ ಕೆಲವರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ನೀರು ಹಾಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ ಎಂಬ ವಿಚಾರ ಉಭಯ ದೇಶಗಳ ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಈ ವಸತಿ ಸಂಕೀರ್ಣದಲ್ಲಿ ಭಾರತೀಯ ರಾಜತಾಂತ್ರಿಕರು ಹಾಗೂ ಇತರ ಸಿಬ್ಬಂದಿ ವಾಸವಿದ್ದಾರೆ. ಆದರೆ ಪೈಪ್‌ಲೈನ್ ಅಳವಡಿಸಿದರೂ ಇದಕ್ಕೆ ಅನಿಲ ಪೂರೈಕೆ ಇನ್ನೂ ಆರಂಭವಾಗಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ ಎನ್ನಲಾಗಿದೆ. ಸಂಕೀರ್ಣದಲ್ಲಿ ಶಾಖ ವ್ಯವಸ್ಥೆ ಚಾಲನೆ ಮಾಡಲು ಅನಿಲ ಬೇಕಾಗಿದ್ದು, ಅನಿಲ ಸರಬರಾಜು ಇಲ್ಲದ ಕಾರಣ ಅಸಾಧ್ಯ ಚಳಿಯಿಂದ ಸಿಬ್ಬಂದಿ ತತ್ತರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News