×
Ad

ಮುಖಂಡರು ಸೋಲನ್ನು ಒಪ್ಪಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು: ನಿತಿನ್ ಗಡ್ಕರಿ

Update: 2018-12-23 10:51 IST

ಪುಣೆ, ಡಿ.23: ‘‘ನಾಯಕತ್ವವಹಿಸಿಕೊಂಡವರು ಸೋಲು ಹಾಗೂ ವೈಫಲ್ಯವನ್ನು ಒಪ್ಪಿಕೊಳ್ಳುವ ಪೃವೃತ್ತಿ ಬೆಳೆಸಿಕೊಳ್ಳಬೇಕು. ಯಶಸ್ಸಿಗೆ ಹಲವು ಅಪ್ಪಂದಿರು ಇರುತ್ತಾರೆ. ಆದರೆ ಸೋಲು ಅನಾಥ. ಯಶಸ್ಸು ಗಳಿಸಿದಾಗ ಅದರ ಶ್ರೇಯಸ್ಸು ಪಡೆಯಲು ಎಲ್ಲರೂ ಮುಂದೆ ಬರುತ್ತಾರೆ. ಸೋತಾಗ ಎಲ್ಲರೂ ಪರಸ್ಪರ ಬೆಟ್ಟು ಮಾಡುತ್ತಾರೆ’’ ಎಂದು ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

 ಪುಣೆ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಅಸೋಸಿಯೇಶನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಗಡ್ಕರಿ,‘‘ಕೆಲವೊಮ್ಮೆ ಬ್ಯಾಂಕ್‌ಗಳು ಲಾಭ ಗಳಿಸುತ್ತವೆ. ಇನ್ನೂ ಕೆಲವು ಬಾರಿ ನಷ್ಟ ಕಾಣುತ್ತವೆ.....ಬ್ಯಾಂಕ್‌ಗಳು ಈ ಎರಡು ಪರಿಸ್ಥಿತಿಯನ್ನು ಎದುರಿಸುತ್ತವೆ....ರಾಜಕೀಯದಲ್ಲಿ ವೈಫಲ್ಯವಾದಾಗ ಸಮಿತಿ ರಚನೆಯಾಗುತ್ತದೆ. ಒಂದು ವೇಳೆ ಯಶಸ್ಸು ಲಭಿಸಿದರೆ ಯಾರೂ ಕೂಡ ನಿಮ್ಮನ್ನು ಮಾತನಾಡಿಸುವುದಿಲ್ಲ’’ ಎಂದು ಗಡ್ಕರಿ ಹೇಳಿದ್ದಾರೆ.

ಇತ್ತೀಚೆಗೆ ರಾಜಸ್ಥಾನ,ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ದೀರ್ಘಸಮಯದ ಬಳಿಕ ಅಧಿಕಾರಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News