ಹಣಕಾಸು ಸಚಿವಾಲಯದಿಂದ ಭ್ರಷ್ಟಾಚಾರದ ಕಾರಣಕ್ಕೆ ಕಿತ್ತುಹಾಕಲ್ಪಟ್ಟ ವ್ಯಕ್ತಿ ಆರ್ ಬಿಐ ಗವರ್ನರ್

Update: 2018-12-23 08:22 GMT

ಹೊಸದಿಲ್ಲಿ, ಡಿ.23: ಬಿಜೆಪಿ ನಾಯಕ ಸುಬ್ರಮಣಿಯನ್‍ ಸ್ವಾಮಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಈ ಅತ್ಯುನ್ನತ ಹುದ್ದೆಗೆ ದಾಸ್ ಅವರನ್ನು ನೇಮಕ ಮಾಡಿರುವುದು "ಅಚ್ಚರಿಯ ಸಂಗತಿ" ಎಂದು ಅವರು ಬಣ್ಣಿಸಿದ್ದಾರೆ.

ಆದರೆ ಈ ಭ್ರಷ್ಟಾಚಾರ ಆರೋಪದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಲು ನಿರಾಕರಿಸಿದರು. ಈ ಹಿಂದೆಯೂ ಶಕ್ತಿಕಾಂತ ದಾಸ್ ವಿರುದ್ಧ ಸ್ವಾಮಿ ಆರೋಪ ಮಾಡಿದ್ದರು.

"ಆರ್ ಬಿಐನ ಹೊಸ ಗವರ್ನರ್ ತೀರಾ ಭ್ರಷ್ಟ ಮನುಷ್ಯ. ಅವರನ್ನು ಹಣಕಾಸು ಸಚಿವಾಲಯದಿಂದ ನಾನೇ ಕಿತ್ತುಹಾಕಿಸಿದ್ದೆ. ಶಕ್ತಿಕಾಂತ್ ದಾಸ್ ಅವರನ್ನು ಭ್ರಷ್ಟ ಎಂದು ಕರೆಯುತ್ತಿದ್ದೆ. ಹಣಕಾಸು ಸಚಿವಾಲಯದಿಂದ ಭ್ರಷ್ಟಾಚಾರದ ಕಾರಣದಿಂದ ಕಿತ್ತುಹಾಕಲ್ಪಟ್ಟ ವ್ಯಕ್ತಿಯನ್ನು ಗವರ್ನರ್ ಆಗಿ ನೇಮಕ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ" ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಆರ್ ಬಿಐ ಗವರ್ನರ್ ಹುದ್ದೆಗೆ ಯಾರು ಸೂಕ್ತ ವ್ಯಕ್ತಿ ಎಂದು ವರದಿಗಾರರು ಸ್ವಾಮಿಯವರನ್ನು ಪ್ರಶ್ನಿಸಿದಾಗ, ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಪ್ರೊಫೆಸರ್ ಆರ್.ವೈದ್ಯನಾಥನ್ ಅವರ ಹೆಸರನ್ನು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News