ಟಾಟಾ ಸ್ಟೀಲ್‌ಗಾಗಿ ಸ್ವಾಧೀನಪಡಿಸಿದ್ದ ಜಮೀನು ಆದಿವಾಸಿ ರೈತರಿಗೆ ವಾಪಸ್

Update: 2018-12-24 13:41 GMT

ರಾಯ್‌ಪುರ,ಡಿ.24: 2005ರಲ್ಲಿ ಛತ್ತೀಸ್‌ಗಡದ ಬಸ್ತಾರ್ ಜಿಲ್ಲೆಯ ಲೊಹಂದಿಗುಡದಲ್ಲಿ ಟಾಟಾ ಸ್ಟೀಲ್‌ನ ಯೋಜನೆಗಾಗಿ ಆದಿವಾಸಿ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಜಮೀನನ್ನು ರೈತರಿಗೆ ವಾಪಸ್ ನೀಡಲು ಕಾಂಗ್ರೆಸ್ ಸರಕಾರ ನಿರ್ಧರಿಸಿದೆ.

ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದ ಸಮಯದಲ್ಲಿ ನವೆಂಬರ್ 10ರಂದು ಜಗ್ದಲ್ಪುರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಜಮೀನನ್ನು ವಾಪಸ್ ನೀಡುವ ಭರವಸೆ ನೀಡಲಾಗಿತ್ತು. ಸಂಪುಟದಲ್ಲಿ ಅನುಮತಿ ದೊರೆತ ಕೂಡಲೇ ಜಮೀನು ವಾಪಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಭೂಪೇಶ್ ಬೇಲ್ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರದಿಂದ ಆದೇಶ ಹೊರಬಂದರೆ ಹತ್ತು ಗ್ರಾಮಗಳ 1,707 ರೈತರು ಒಟ್ಟಾರೆ 1,764 ಹೆಕ್ಟೇರ್ ಜಮೀನನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಇದು ಒಂದು ಐತಿಹಾಸಿಕ ನಿರ್ಧಾರವಾಗಿದೆ, ಯಾಕೆಂದರೆ ಇಂಥದ್ದೊಂದು ಇಂದಿನವರೆಗೆ ಇಡೀ ದೇಶದಲ್ಲಿ ಎಲ್ಲೂ ನಡೆದಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸಂಪುಟ ಸಭೆ ಸೇರಲಿದೆ ಮತ್ತು ಈ ಆದೇಶವನ್ನು ಸಭೆಯ ಮುಂದಿಡಲಾಗುವುದು. ಸಭೆಯ ಮೊದಲ ದಿನವೇ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ 19,500 ಹೆಕ್ಟೇರ್ ಜಾಗದಲ್ಲಿ ಸ್ಟೀಲ್ ಕಾರ್ಖಾನೆ ನಿರ್ಮಿಸುವ ಯೋಜನೆಯ ಒಪ್ಪಂದಕ್ಕೆ 2005ರಲ್ಲಿ ಟಾಟಾ ಸ್ಟೀಲ್ ಮತ್ತು ಅಂದಿನ ಬಿಜೆಪಿ ಸರಕಾರ ಸಹಿ ಹಾಕಿತ್ತು. ಆದರೆ, ಈ ಯೋಜನೆಯನ್ನು ಟಾಟಾ ಸ್ಟೀಲ್ 2016ರಲ್ಲಿ ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News