ಮುಝಫ್ಫರ್‌ನಗರ ಗಲಭೆ ಪ್ರಕರಣದ ಆರೋಪಿ ಸಾವು: ಕೊಲೆ ಶಂಕೆ ವ್ಯಕ್ತಪಡಿಸಿದ ಪುತ್ರ
ಲಖ್ನೊ,ಡಿ.24: 2013ರ ಮುಝಫ್ಫರ್‌ನಗರ ದಂಗೆಗಳ ಪ್ರಕರಣದಲ್ಲಿ ಆರೋಪಿಯಾಗಿದ್ದ 60ರ ಹರೆಯದ ವ್ಯಕ್ತಿ ರವಿವಾರ ಸಾವನ್ನಪ್ಪಿದ್ದು, ಅವರ ಪುತ್ರ ಕೊಲೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
60ರ ಹರೆಯದ ಸೋದನ್ ಸಿಂಗ್ ಮೃತದೇಹ ಮುಝಫ್ಫರ್‌ನಗರದ ಸಿಖೇಡ ಗ್ರಾಮದಲ್ಲಿ ನೀರಿನ ದೊಡ್ಡ ಪೈಪ್ ಇದ್ದ ಶೆಡ್ ಒಳಗೆ ಛಾವಣಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅನೂಪ್,ರಾಜೇಶ್, ಸುನೀಲ್ ಕುಮಾರ್ ಮತ್ತು ರಾಮಗೋಪಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
2013, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಮುಝಫ್ಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ನಡೆದ ಕೋಮು ದಂಗೆಗಳಲ್ಲಿ 60 ಮಂದಿ ಸಾವನ್ನಪ್ಪಿದ್ದರೆ ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು.