ಶಾರುಖ್ ‘ಝೀರೋ’ ಹಿಂದಿಕ್ಕಿ ಬಾಕ್ಸ್ ಆಫೀಸ್ ನಲ್ಲಿ ಚಿನ್ನ ಬಾಚಿದ ‘ಕೆಜಿಎಫ್’

Update: 2018-12-24 13:45 GMT

ಮುಂಬೈ, ಡಿ. 24: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಬಾಕ್ಸ್ ಆಫೀಸ್ ನಲ್ಲಿ ಚಿನ್ನವನ್ನೇ ಬಾಚಿದೆ ಎಂಬ ಸುದ್ದಿ ಬಂದಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಬಾಲಿವುಡ್ ಬಾದಷಾಹ್ ಶಾರುಖ್ ಖಾನ್ ಚಿತ್ರವನ್ನೇ ಗಳಿಕೆಯಲ್ಲಿ ಹಿಂದಿಕ್ಕಿದ ದಾಖಲೆ ಮಾಡಿದೆ.

ಕೆಜಿಎಫ್ 59.61 ಕೋಟಿ ರೂ ಗಳಿಸಿದ್ದರೆ ಶಾರುಖ್ ಅಭಿನಯದ ಝೀರೋ 59.07 ಕೋಟಿ ರೂ ಗಳಿಸಿ ಎರಡನೇ ಸ್ಥಾನದಲ್ಲಿದೆ. ಕೆಜಿಎಫ್ ನ ಹಿಂದಿ ಅವತರಣಿಕೆ 10 ಕೋಟಿ ರೂ ಸಂಪಾದಿಸಿದೆ ಎಂದು ಚಿತ್ರ ವಿಮರ್ಶಕ ತರಣ್ ಆದರ್ಶ್ ರನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅವರ ಪ್ರಕಾರ ಕೆಜಿಎಫ್ ದಿನದಿಂದ ದಿನಕ್ಕೆ ತನ್ನ ಗಳಿಕೆ ಹೆಚ್ಚಿಸಿಕೊಳ್ಳುತ್ತಿದೆ. ಶುಕ್ರವಾರ 18.1 ಕೋಟಿ ರೂ  ಗಳಿಸಿದ್ದರೆ, ಶನಿವಾರ 19.2 ಕೋಟಿ ಬಾಚಿಕೊಂಡಿತ್ತು. ರವಿವಾರ 21.8 ಕೋಟಿ ಗಳಿಸಿದೆ. ಆನಂದ್ ಎಲ್. ರಾಯ್ ನಿರ್ದೇಶನದ ‘ಝೀರೋ’ ಮೊದಲ ದಿನ 20.1 ಕೋಟಿ ಗಳಿಸಿದ್ದರೆ ಎರಡನೇ ದಿನ 18.2 ಕೋಟಿ  ಹಾಗು ರವಿವಾರ 20.7 ಕೋಟಿ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News