ದಿಲ್ಲಿಯಲ್ಲಿ ತೀವ್ರಗೊಂಡ ವಾಯುಮಾಲಿನ್ಯ

Update: 2018-12-24 14:13 GMT

ಹೊಸದಿಲ್ಲಿ,ಡಿ.24: ದಿಲ್ಲಿಯಲ್ಲಿ ವಾಯುಮಾಲಿನ್ಯವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರದವರೆಗೆ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿಯ ಕಾರ್ಖಾನೆಗಳನ್ನು ಮುಚ್ಚುವಂತೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ನೇತೃತ್ವದ ಕಾರ್ಯಪಡೆಯು ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರಕ್ಕೆ ಸೋಮವಾರ ಶಿಫಾರಸು ಮಾಡಿದೆ.

ಸತತ ಮೂರನೇ ದಿನವಾದ ಸೋಮವಾರವೂ ದಿಲ್ಲಿಯಲ್ಲಿ ವಾಯುಮಾಲಿನ್ಯವು ಗಂಭೀರ ಮಟ್ಟದಲ್ಲಿಯೇ ಇದೆ.

ಹೊರಗಿನ ಚಟುವಟಿಕೆಗಳನ್ನು ಕನಿಷ್ಠಗೊಳಿಸುವಂತೆ ಮತ್ತು ಖಾಸಗಿ ವಾಹನಗಳನ್ನು ಬಳಸದಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ದೀಪಾವಳಿಯ ಬಳಿಕ ಇದೇ ಮೊದಲ ಬಾರಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಅತ್ಯಂತ ತೀವ್ರಗೊಂಡಿದೆ.

ರಸ್ತೆಗಳಲ್ಲಿ,ವಿಶೇಷವಾಗಿ ಅಧಿಕ ಸಂಚಾರ ದಟ್ಟಣೆಯಿರುವ ಮಾರ್ಗಗಳಲ್ಲಿ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರ ವಿಶೇಷ ತಂಡಗಳ ನಿಯೋಜನೆಗೂ ಸಿಪಿಸಿಬಿ ಸೂಚಿಸಿದೆ.

ವಾಹನಗಳಿಂದ ಮತ್ತು ಜೈವಿಕ ತ್ಯಾಜ್ಯಗಳ ಸುಡುವಿಕೆಯಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕ್ರಮಗಳನ್ನು ಜಾರಿಗೊಳಿಸಲು ತಳಮಟ್ಟದ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಕಾರ್ಯಪಡೆಯು ಶನಿವಾರ ಅಧಿಕಾರಿಗಳಿಗೆ ಶಿಫಾರಸು ಮಾಡಿತ್ತು.

ಸೋಮವಾರ ದಿಲ್ಲಿಯ 32 ಪ್ರದೇಶಗಳಲ್ಲಿ ವಾಯುಮಾಲಿನ್ಯ ಗಂಭೀರ ಪ್ರಮಾಣದಲ್ಲಿದ್ದು,ಐದು ಪ್ರದೇಶಗಳಲ್ಲಿ ಅದು ಅತ್ಯಂತ ತೀವ್ರಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News