ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ದ ಸುಶೀಲ್: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ಡಿ.24: 1997ರಲ್ಲಿ 59 ಜೀವಗಳನ್ನು ಬಲಿ ಪಡೆದುಕೊಂಡಿದ್ದ ಉಪಹಾರ್ ಸಿನೆಮಾ ಅಗ್ನಿ ಅವಘಡ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸುಶೀಲ್ ಅನ್ಸಾಲ್ ಅವರು 2013ರಲ್ಲಿ ತತ್ಕಾಲ್ ಯೋಜನೆಯಡಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಗ ತನ್ನ ದೋಷನಿರ್ಣಯದ ಮಾಹಿತಿಯನ್ನು ಒದಗಿಸದೆ ಭಾರತ ಸರಕಾರವನ್ನು ದಾರಿ ತಪ್ಪಿಸಿದ್ದರು ಮತ್ತು ಸುಳ್ಳು ಪ್ರಮಾಣವನ್ನು ಮಾಡಿದ್ದರು ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ. ಇದಕ್ಕಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವುದು ಅಗತ್ಯವಾಗಿದೆ ಎಂದು ಅದು ತಿಳಿಸಿದೆ.
ನ್ಯಾ.ನಜ್ಮಿ ವಝೀರಿ ಅವರು ಉಪಹಾರ್ ಪ್ರಕರಣದಲ್ಲಿ ಅನ್ಸಾಲ್ ತನ್ನ ದೋಷನಿರ್ಣಯದ ಮಾಹಿತಿಯನ್ನು ಮುಚ್ಚಿಟ್ಟಿದ್ದರೂ 2013ರಲ್ಲಿ ಪಾಸ್‌ಪೋರ್ಟ್ ವಿತರಣೆಗಾಗಿ ಅವರ ಪರವಾಗಿ ದೃಢೀಕರಣ ವರದಿಯನ್ನು ನೀಡಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ.
ನಾಗರಿಕನೋರ್ವ ತತ್ಕಾಲ್ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಆತನಿಂದ ಕೋರಲಾದ ಮಾಹಿತಿಯನ್ನು ಒದಗಿಸುವುದು ಪಾಸ್‌ಪೋರ್ಟ್ ಕಾಯ್ದೆಯಡಿ ಕಡ್ಡಾಯವಲ್ಲ ಎಂಬ ಅನ್ಸಾಲ್ ಪರ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ. ತತ್ಕಾಲ್ ಯೋಜನೆಯು ತುರ್ತು ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ನೀಡಲು ವಿಶೇಷ ವ್ಯವಸ್ಥೆಯಾಗಿದೆ ಮತ್ತು ಅದು ಸರಕಾರವು ಕೇಳಿರುವ ಮಾಹಿತಿಗಳ ಸ್ವೀಕೃತಿಗೆ ಒಳಪಟ್ಟಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ತಾನು ಯಾವುದೇ ಅಪರಾಧಕ್ಕಾಗಿ ಯಾವುದೇ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿಲ್ಲ ಎಂಬ ಸುಳ್ಳು ಪ್ರಮಾಣಪತ್ರವನ್ನು ಅನ್ಸಾಲ್ ಸಲ್ಲಿಸಿದ್ದರು ಎನ್ನುವುದನ್ನು ಅದು ಎತ್ತಿ ಹಿಡಿದಿದೆ.
ಅನ್ಸಾಲ್‌ಗೆ ಪಾಸ್‌ಪೋರ್ಟ್ ವಿತರಣೆಯಲ್ಲಿ ಪಾಸ್‌ಪೋರ್ಟ್ ಮತ್ತು ಪೊಲೀಸ್ ಅಧಿಕಾರಿಗಳ ಕ್ರಿಮಿನಲ್ ದುರ್ವತನೆಯ ಆರೋಪದಲ್ಲಿ ಸಿಬಿಐ ತನಿಖೆಯನ್ನು ಕೋರಿ ಉಪಹಾರ್ ದುರಂತ ಸಂತ್ರಸ್ತರ ಸಂಘವು ತನ್ನ ಅಧ್ಯಕ್ಷೆ ನೀಲಂ ಕೃಷ್ಣಮೂರ್ತಿ ಅವರ ಮೂಲಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ದುರಂತದಲ್ಲಿ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿರುವ ನೀಲಂ ಕಳೆದ 20 ವರ್ಷಗಳಿಂದಲೂ ಸಂತ್ರಸ್ತ ಕುಟುಂಬಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
1997,ಜೂನ್ 13ರಂದು ಉಪಹಾರ್ ಸಿನೆಮಾದಲ್ಲಿ ‘ಬಾರ್ಡರ್ ’ ಹಿಂದಿ ಚಿತ್ರ ಪ್ರದರ್ಶನದ ವೇಳೆ ಅಗ್ನಿ ಅವಘಡ ಸಂಭವಿಸಿತ್ತು.