ನಾವು ಪೊಲೀಸರ ಸಮವಸ್ತ್ರ ಕಳಚುವ ದಿನ ಬರಲಿದೆ: ಪ.ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷನ ಬೆದರಿಕೆ

Update: 2018-12-24 15:36 GMT

ಹೊಸದಿಲ್ಲಿ, ಡಿ. 24: ತನ್ನ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಶನಿವಾರ ಆರೋಪಿಸಿದ್ದಾರೆ ಹಾಗೂ ಪೊಲೀಸರ ಸಮವಸ್ತ್ರ ಕಳಚಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ.

ಬಿರ್ಭೂಮ್ ಜಿಲ್ಲೆಯ ರಾಮ್ ಪುರ್ಹಾತ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀವು ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದೀರಿ. ನಾವು ನಿಮ್ಮ ಸಮವಸ್ತ್ರ ಕಳಚುವ ಒಂದು ದಿನ ಬರುತ್ತದೆ. ನಾವು ಎಲ್ಲವನ್ನೂ ಗಮನದಲ್ಲಿರಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹೋರಾಡಲು ಬೇಕಾದ ಹಣದ ಬಗ್ಗೆ ನಾವು ಲೆಕ್ಕಾಚಾರ ಹಾಕುತ್ತಿದ್ದೇವೆ. ಒಂದು ಬಾರಿ ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಅಧಿಕಾರಿಗಳನ್ನು ನಾವು ಪತ್ತೆ ಹಚ್ಚಲಿದ್ದೇವೆ” ಎಂದರು.

ಬಿರ್ಭೂಮ್‌ನಲ್ಲಿ ರಥ ಯಾತ್ರೆ ನಡೆಸಲು ಪಕ್ಷ ಸಿದ್ಧತೆ ನಡೆಸುತ್ತಿದೆ. ಆದಾಗ್ಯೂ, ಪಕ್ಷ ರಥ ಯಾತ್ರೆ ನಡೆಸುವುದಕ್ಕೆ ಅವಕಾಶ ಕಲ್ಪಿಸಿ ಏಕಸದಸ್ಯ ಪೀಠ ನೀಡಿದ ಆದೇಶಕ್ಕೆ ಕೋಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ. ಬಳಿಕ ಕೇವಲ ಸಾರ್ವಜನಿಕ ಸಭೆ ಮಾತ್ರ ನಡೆಸಲಾಗುತ್ತಿದೆ.

ಸಾರ್ವಜನಿಕ ಸಭೆಯಲ್ಲಿ ಘೋಷ್ ರಥಯಾತ್ರೆಗೆ ತಡೆ ಒಡ್ಡಿದ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘‘ಪಶ್ಚಿಮಬಂಗಾಳದಲ್ಲಿ ಪ್ರಜಾಪ್ರಭುತ್ವ ಇಲ್ಲ. ಪ್ರತಿಪಕ್ಷ ಸಾರ್ವಜನಿಕ ಸಭೆ ಅಥವಾ ರ್ಯಾಲಿಗಳನ್ನು ನಡೆಸಲು ಕೂಡ ಸ್ವಾತಂತ್ರ್ಯ ಇಲ್ಲ. ಇಂತಹ ಚಟುವಟಿಕೆಗಳಿಗೆ ಆಡಳಿತ ಪರವಾನಿಗೆ ನೀಡುತ್ತಿಲ್ಲ. ಈ ವಿಷಯವನ್ನು ವಿರೋಧಿಸಿ ಗಣತಂತ್ರ ಬಚಾವೋ ಯಾತ್ರೆ ನಡೆಸಲು ನಿರ್ಧರಿಸಿದ್ದೇವೆ. ಆದರೆ, ಇದನ್ನು ತಡೆಯಲು ರಾಜ್ಯ ಸರಕಾರ ಹಗಲು, ರಾತ್ರಿ ಪ್ರಯತ್ನಿಸುತ್ತಿದೆ. ನಮ್ಮ ರಥಯಾತ್ರೆ ತಡೆಯಲು ರಾಜ್ಯ ಸರಕಾರದ ದೆಹಲಿಯಿಂದ ವಕೀಲರನ್ನು ಕರೆ ತಂದಿದೆ. ಬಿಜೆಪಿ ಬೆಳೆಯುತ್ತಿರುವುದು ಅವರಿಗೆ ಭೀತಿ ಉಂಟು ಮಾಡಿದೆ.’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News