×
Ad

ಜನ ಸಾಮಾನ್ಯರ ಕಂಪ್ಯೂಟರ್ ಮೇಲೆ ನಿಗಾ: ಮೋದಿ ಸರಕಾರದ ವಿರುದ್ಧ ಸುಪ್ರೀಂನಲ್ಲಿ ಪಿಐಎಲ್

Update: 2018-12-24 21:29 IST

ಹೊಸದಿಲ್ಲಿ, ಡಿ. 24: ಯಾವುದೇ ಕಂಪ್ಯೂಟರ್ ವ್ಯವಸ್ಥೆಯ ಮಾಹಿತಿ ಸಂಗ್ರಹ, ನಿಗಾ ಹಾಗೂ ಗೂಢಲಿಪಿ ಬೇಧಿಸಲು 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿ ಕೇಂದ್ರ ಸರಕಾರ ಜಾರಿಗೊಳಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.

ಕೇಂದ್ರ ಸರಕಾರದ ಡಿಸೆಂಬರ್ 20ರ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ವಕೀಲ ಮನೋಹರ್ ಲಾಲ್ ವರ್ಮಾ ದೂರು ದಾಖಲಿಸಿದ್ದಾರೆ.

ಕೇಂದ್ರ ಸರಕಾರದ ಆದೇಶದ ಪ್ರಕಾರ ಕಂಪ್ಯೂಟರ್ ವ್ಯವಸ್ಥೆಯಿಂದ ಮಾಹಿತಿ ಪಡೆಯಲು ಹಾಗೂ ವಿಶ್ಲೇಷಣೆ ನಡೆಸಲು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ 10 ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಅವಕಾಶ ನೀಡಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

“ಈ ಅಧಿಸೂಚನೆ ಅಸಾಂವಿಧಾನಿಕ ಹಾಗೂ ಕಾನೂನಿಗೆ ಅಲ್ಟ್ರಾ ವೈರಸ್’’ ಎಂದು ಶರ್ಮಾ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಅಧಿಸೂಚನೆ ಆಧಾರದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ಡೆ ಅಡಿ ಕೇಂದ್ರೀಯ ತನಿಖಾ ಸಂಸ್ಥೆಗಳು ಯಾರೊಬ್ಬರ ವಿರುದ್ಧ ವಿಚಾರಣೆ ತನಿಖೆ ಹಾಗೂ ಕ್ರಿಮಿನಲ್ ಕಲಾಪ ಆರಂಭಿಸುವುದನ್ನು ನಿಷೇಧಿಸಬೇಕು ಎಂದು ಅವರು ಕೋರಿದ್ದಾರೆ.

ಗುಲಾಮಗಿರಿ ಹಾಗೂ ಅಘೋಷಿತ ತುರ್ತು ಪರಿಸ್ಥಿತಿ ಅಡಿಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಲು ಸರ್ವಾಧಿಕಾರದ ಮೂಲಕ ಸಂಪೂರ್ಣ ದೇಶವನ್ನು ನಿಯಂತ್ರಿಸಲು ರಾಜಕೀಯ ವಿರೋಧಿಗಳು, ಚಿಂತಕರು ಹಾಗೂ ಭಾಷಣಕಾರರನ್ನು ಪತ್ತೆಹಚ್ಚಲು ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News