ಭೀಮಾ ಕೋರೆಗಾಂವ್ ಹಿಂಸಾಚಾರ: ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ

Update: 2018-12-24 16:11 GMT

ಪುಣೆ,ಡಿ.24: ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಎಫ್‌ಐಆರ್‌ ಅನ್ನು ರದ್ದುಗೊಳಿಸಲು ನಿರಾಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯ ಇದೊಂದು ಆಳವಾದ ಪಿತೂರಿಯಾಗಿತ್ತು ಮತ್ತು ಇದರ ಪರಿಣಾಮ ಬಹಳ ಗಂಭೀರವಾಗಿತ್ತು ಎಂದು ತಿಳಿಸಿದೆ.  

ಭೀಮಾ ಕೋರೆಗಾಂವ್ ಹಿಂಸಾಚಾರ ಮತ್ತು ಎಲ್ಗಾರ್ ಪರಿಷದ್ ನಡೆಸಿದ ಆರೋಪದಲ್ಲಿ ಹಲವು ಮಾನವಹಕ್ಕುಗಳ ಹೋರಾಟಗಾರರನ್ನು ಪುಣೆ ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಹಕ್ಕುಗಳ ಹೋರಾಟಗಾರ ಆನಂದ ತೇಲ್ತುಂಬ್ಡೆ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಾಧೀಶರಾದ ಬಿ.ಪಿ ಧರ್ಮಾಧಿಕಾರಿ ಮತ್ತು ಎಸ್.ವಿ ಕೋತ್ವಾಲ್ ಈ ಅರ್ಜಿಯನ್ನು ತಳ್ಳಿ ಹಾಕಿದ್ದಾರೆ. ತನ್ನ ಅರ್ಜಿಯಲ್ಲಿ ತೇಲ್ತುಂಬ್ಡೆ, ಪೊಲೀಸರು ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ತಿಳಿಸಿ ತನ್ನ ಮೇಲೆ ಹೊರಿಸಲಾಗಿದ್ದ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದರು. ಆದರೆ ಇದನ್ನು ನಿರಾಕರಿಸಿರುವ ಪೊಲೀಸರು ತೇಲ್ತುಂಬ್ಡೆ ಈ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ ಎನ್ನಲು ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿದ್ದಾರೆ.  ಅಪರಾದವು ಅತ್ಯಂತ ಗಂಭೀರವಾಗಿದೆ. ಈ ಪಿತೂರಿಯು ಅತ್ಯಂತ ಆಳವಾಗಿದ್ದು ಇದರ ಪರಿಣಾಮ ಬಹಳ ಗಂಭೀರವಾಗಿದೆ. ಇದರ ಅಗಾಧತೆಯನ್ನು ಪರಿಗಣಿಸಿದಾಗ ಆರೋಪಿಗಳ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕಲು ತನಿಖಾ ತಂಡಕ್ಕೆ ಇನ್ನಷ್ಟು ಸಮಯಾವಕಾಶ ನೀಡುವ ಅಗತ್ಯವಿದೆ ಎಂದು ನ್ಯಾಯ ಪೀಠ ತಿಳಿಸಿದೆ. ತನಿಖಾ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ವಿಭಾಗೀಯಪೀಠ ತೇಲ್ತುಂಬ್ಡೆ ವಿರುದ್ಧ ಪೊಲೀಸರು ಸಾಕಷ್ಟು ಪುರಾವೆಗಳನ್ನು ಕಲೆಹಾಕಿದ್ದಾರೆ ಮತ್ತು ಅವರ ವಿರುದ್ಧ ಹೊರಿಸಲಾಗಿರುವ ಆರೋಪ ಆಧಾರರಹಿತವಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News