ಅನುಕೂಲಸ್ಥರು ಪಡಿತರ ತ್ಯಜಿಸಲು ಕರೆ: ಬಡವರಿಗೆ ನೆರವಾಗಲು ಕೇರಳ ಸರಕಾರದ ಹೊಸ ಪ್ರಯತ್ನ

Update: 2018-12-24 16:26 GMT

ಕೊಚ್ಚಿ, ಡಿ. 24: ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರಿಗೆ ಮಾರುಕಟ್ಟೆ ಬೆಲೆ ಪಾವತಿಸುವ ಸಾಮರ್ಥ್ಯ ಹೊಂದಿರುವವರು ಸಬ್ಸಿಡಿ ತ್ಯಜಿಸಿ ಎಂದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಯಾನ ಆರಂಭಿಸಿದ ರೀತಿಯಲ್ಲಿ ಕೇರಳ ಸರಕಾರ ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಕ್ಕಿಯ ಪಾಲನ್ನು ಹಿಂದಿರುಗಿಸುವ ಮೂಲಕ ಬಡವರಿಗೆ ನರವಾಗುವಂತೆ ಆರ್ಥಿಕ ಸದೃಢರಾಗಿರುವವರಲ್ಲಿ ಮನವಿ ಮಾಡಿದೆ.

ಈ ಬಗ್ಗೆ ರಾಜ್ಯ ಸರಕಾರ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದೆ. ಅಕ್ಕಿಗೆ ಮಾರುಕಟ್ಟೆ ಬೆಲೆ ನೀಡುವ ಸಾಮರ್ಥ್ಯ ಹೊಂದಿರುವವರು ಪಡಿತರ ಅಂಗಡಿಯ ತಮ್ಮ ಅಕ್ಕಿಯ ಪಾಲನ್ನು ಆರು ತಿಂಗಳು ಕಾಲ ಹಿಂದಿರುಗಿಸಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರ ಮನವಿ ಮಾಡಿದೆ. ಪಡಿತರ ತ್ಯಜಿಸುವ ಯೋಜನೆಯ ಒಂದು ಭಾಗವಾಗಿ ಫಲಾನುಭವಿಗಳು ನಾಗರಿಕ ಪೂರೈಕೆ ಇಲಾಖೆಯ ವೆಬ್‌ಸೈಟ್ ಲಾಗ್ ಆನ್ ಮಾಡಿ ಅದರಲ್ಲಿ 10 ಅಂಕೆಗಳ ಪಡಿತರ ಚೀಟಿ ಸಂಖ್ಯೆ ನಮೂದಿಸಬೇಕು ಹಾಗೂ ಹಿಂದಿರುಗಿಸುವ ತಮ್ಮ ಪಡಿತರ ಪಾಲನ್ನು ದಾಖಲಿಸಬೇಕು. ಒನ್ ಟೈಮ್ ಪಾಸ್‌ವರ್ಡ್ ಸಂಖ್ಯೆ ಫಲಾನುಭವಿಗಳ ಮೊಬೈಲ್‌ಗೆ ಬರುತ್ತದೆ. ಅದನ್ನು ಹಾಕಿ ಆ್ಯಕ್ಟಿವೇಟ್ ಮಾಡಬಹುದು. ಫಲಾನುಭವಿಗಳು ಒಂದು ಬಾರಿ ತಮ್ಮ ಪಡಿತರವನ್ನು ಹಿಂದಿರುಗಿಸಿದರೆ, ಮತ್ತೆ ಪಡೆಯಲು ಆರು ತಿಂಗಳ ನಂತರ ಅರ್ಜಿ ಸಲ್ಲಿಸಬೇಕು.

ಈ ನಡೆ ಯೋಗಕ್ಷೇಮ ಆಧರಿತ. ಅಗತ್ಯ ಇರುವ ಬಡ ಕುಟುಂಬಕ್ಕೆ ಪಡಿತರ ಪೂರೈಸಲು ಈ ಯೋಜನೆ ಆಡಳಿತಕ್ಕೆ ನೆರವಾಗಲಿದೆ ಎಂದು ನಾಗರಿಕ ಪೂರೈಕೆ ಕಮಿಷನರೇಟ್‌ನ ಸಹಾಯಕ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News