×
Ad

ಸಂದೇಶಗಳನ್ನು ತಿಳಿಯಲು ಪಾಸ್‌ವರ್ಡ್ ಭೇದಿಸುವ ಪ್ರಸ್ತಾವ: ಪ್ರತಿಕ್ರಿಯೆ ಆಹ್ವಾನಿಸಿದ ಕೇಂದ್ರ

Update: 2018-12-24 22:20 IST

ಹೊಸದಿಲ್ಲಿ, ಡಿ.24: ಕಾನೂನುಬಾಹಿರ ವಿಷಯಗಳನ್ನು ಒಳಗೊಂಡಿರುವ ಸಂದೇಶಗಳ ಗೂಢಲಿಪೀಕರಣ(ಪಾಸ್‌ವರ್ಡ್)ವನ್ನು ಭೇದಿಸುವ ಕುರಿತು ಪ್ರಸ್ತಾವಿತ ನಿಯಮದ ಬಗ್ಗೆ ವಿವಿಧ ಸಾಮಾಜಿಕ ಮಾಧ್ಯಮಗಳಿಂದ ಸಲಹೆ, ಟಿಪ್ಪಣಿಯನ್ನು ಕೇಂದ್ರ ಸರಕಾರ ಆಹ್ವಾನಿಸಿದೆ.

ಕಾನೂನುಬಾಹಿರ ಎಂದು ಪರಿಗಣಿಸಲಾಗುವ ಸಂದೇಶಗಳ ಗೂಢಲಿಪೀಕರಣ ಬೇಧಿಸುವ ಕೇಂದ್ರ ಸರಕಾರದ ನಿರ್ಧಾರದ ಕುರಿತು ಸರಕಾರ ಮತ್ತು ಸಂಸ್ಥೆಗಳ ಮಧ್ಯೆ ಚರ್ಚೆ ನಡೆಯಬೇಕು ಎಂದು ಮಾಧ್ಯಮಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸರಕಾರ, ಗೂಢಲಿಪೀಕರಣ ಭೇದಿಸುವ ಕುರಿತು ಸಮಾಲೋಚನೆ ನಡೆಯುತ್ತಿದೆ . ಆದರೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿದೆ.

  ಗಾಳಿ ಸುದ್ದಿಯ ಕಾರಣದಿಂದ ದೇಶದ ಹಲವೆಡೆ ಗುಂಪು ಥಳಿತ, ಹತ್ಯೆ,  ಹಿಂಸಾಚಾರದಿಂದ ಅಮಾಯಕರು ಬಲಿಯಾಗುವ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ನಿಯಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತಾವಿತ ನಿಯಮದ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಯಾವುದೇ ಸಂದೇಶದ ಬಗ್ಗೆ ಸರಕಾರ ಕೇಳುವ ಪ್ರಶ್ನೆಗೆ 72 ಗಂಟೆಯೊಳಗೆ ಉತ್ತರಿಸಬೇಕಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ನಿಯಮಕ್ಕೆ ಕರಡು ಬದಲಾವಣೆಯ ಪ್ರಕಾರ ಅಂತರ್ಜಾಲ ವೇದಿಕೆಗಳು ತಂತ್ರಜ್ಞಾನ ಆಧಾರಿತ ಸ್ವಯಂಚಾಲಿತ ಉಪಕರಣವನ್ನು ಅಳವಡಿಸಿಕೊಳ್ಳಬೇಕಿದ್ದು, ಇದು ಕಾನೂನುಬಾಹಿರ ವಿಷಯಗಳನ್ನು ಪೂರ್ವಭಾವಿಯಾಗಿ ಗಮನಿಸಿ ಅದನ್ನು ರದ್ದುಪಡಿಸುತ್ತದೆ.

ಕರಡು ನಿಯಮದ ಕುರಿತು ಶುಕ್ರವಾರ ಸರಕಾರ ಮತ್ತು ಗೂಗಲ್, ಫೇಸ್‌ಬುಕ್, ವಾಟ್ಸ್ಯಾಪ್, ಅಮಝಾನ್, ಯಾಹೂ, ಟ್ವಿಟರ್, ಶೇರ್‌ಚಾಟ್, ಸೆಬಿ ಹಾಗೂ ದೇಶದ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳ ಮಧ್ಯೆ ಚರ್ಚೆ ನಡೆದಿದೆ. ಜನವರಿ 7ರ ಒಳಗೆ ತಮ್ಮ ಸಲಹೆ, ಟಿಪ್ಪಣಿಯನ್ನು ಒದಗಿಸುವಂತೆ ಸರಕಾರ ಈ ಸಂಸ್ಥೆಗಳಿಗೆ ತಿಳಿಸಿದೆ.

 ಪ್ರಸ್ತಾವಿತ ನಿಯಮವನ್ನು ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಘಿಸುವ ಪ್ರಯತ್ನ ಎಂದು ಕರೆಯುವ ಬಗ್ಗೆ ಸರಕಾರ ಆಕ್ಷೇಪ ಸೂಚಿಸಿದೆ. ಪ್ರಸ್ತಾವಿತ ನಿಯಮದ ಏಕೈಕ ಉದ್ದೇಶ, ಗಾಳಿಸುದ್ದಿ ಹಬ್ಬಿಸಿ ವಿಕೃತ ಆನಂದ ಪಡುತ್ತಿರುವವರನ್ನು ಗುರುತಿಸುವ ಮೂಲಕ ಗುಂಪು ಥಳಿತದಿಂದ ಆಗುವ ಹತ್ಯೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸುವುದಾಗಿದೆ. ಈ ವರ್ಷ ವಾಟ್ಸ್ಯಾಪ್‌ನಲ್ಲಿ ಮಕ್ಕಳ ಅಪಹರಣಕಾರರು ಎಂಬ ಗಾಳಿಸುದ್ದಿಯಿಂದ ನಡೆದಿರುವ ಗುಂಪು ಥಳಿತ ಮತ್ತು ಸಾವಿನ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಸರಕಾರ ತಿಳಿಸಿದೆ.

  ಆದರೆ ಗೂಢಲಿಪೀಕರಣ ಬೇಧಿಸಿದರೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯ ಅನನ್ಯತೆಗೆ ಹಾನಿಯಾಗುತ್ತದೆ ಎಂದು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿ ಸರಕಾರದ ಪ್ರಸ್ತಾವಿತ ನಿಯಮಕ್ಕೆ ವಿರೋಧ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಸಂದೇಶಗಳ ‘ಎಂಡ್ ಟು ಎಂಡ್’ (ಸಂವಹನ ಬಳಕೆದಾರರು ಮಾತ್ರ ಓದಬಲ್ಲ ಸಂದೇಶ)ಗೂಢಲಿಪೀಕರಣವನ್ನು ತಾನು ಬಯಸುತ್ತಿಲ್ಲ. ಆದರೆ ಇಂತಹ ಹಾನಿಕಾರಕ ಸಂದೇಶಗಳ ಮೂಲವನ್ನು ತಿಳಿದುಕೊಳ್ಳಲು ಬಯಸುವುದಾಗಿ ಸರಕಾರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News