ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯು ಗುಣಮಟ್ಟ

Update: 2018-12-25 16:34 GMT

ಹೊಸದಿಲ್ಲಿ, ಡಿ.25: ದಿಲ್ಲಿಯ ವಾಯುಗುಣಮಟ್ಟ ‘ಗಂಭೀರ ಹಂತ’ಕ್ಕೆ ತಲುಪಿದ್ದು, ಸಮಸ್ಯೆಯನ್ನು ನಿವಾರಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ವಾಹನ ಸರದಿ ಕ್ರಮವಾಗಿರುವ ‘ಸಮ-ಬೆಸ’ ಯೋಜನೆ ಮತ್ತೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಗಿಡಗಳನ್ನು ನೆಡುವ ಅಭಿಯಾನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಮತ್ತೆ ‘ಸಮ-ಬೆಸ’ ಯೋಜನೆ ಜಾರಿಗೊಳಿಸಬಹುದು. ಮಾಲಿನ್ಯ ಕಡಿಮೆಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಸತತ ನಾಲ್ಕನೇ ದಿನವಾದ ಮಂಗಳವಾರವೂ ದಿಲ್ಲಿಯ ಗಾಳಿಯ ಗುಣಮಟ್ಟ ಗಂಭೀರ ಸ್ಥಿತಿಯಲ್ಲಿಯೇ ಮುಂದುವರಿದಿದೆ. ದಿಲ್ಲಿ ರಾಜ್ಯದ 25 ಪ್ರದೇಶಗಳು ಗಂಭೀರ ಮಟ್ಟ, 9 ಪ್ರದೇಶಗಳು ಅತೀ ಕಳಪೆ ವಾಯು ಗುಣಮಟ್ಟ ದಾಖಲಿಸಿದೆ. ಸುಪ್ರೀಂಕೋರ್ಟ್ ಜಾರಿಗೊಳಿಸಿರುವ ‘ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್’ ಪ್ರಕಾರ ಗಾಳಿಯ ಗುಣಮಟ್ಟ ‘ಗಂಭೀರ +’ ಸ್ಥಿತಿಗೆ ತಲುಪಿ 48 ಗಂಟೆಗಳ ಕಾಲ ಇದೇ ರೀತಿ ಇದ್ದರೆ ಆಗ, ಟ್ರಕ್‌ಗಳು ದಿಲ್ಲಿಗೆ ಪ್ರವೇಶಿಸುವುದನ್ನು ನಿಷೇಧಿಸುವುದು, ಸಮ-ಬೆಸ ಯೋಜನೆ ಜಾರಿಗೊಳಿಸುವುದು, ಶಾಲೆಗಳನ್ನು ಮುಚ್ಚುವುದು ಮುಂತಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News