ಕೇದರನಾಥ ಪ್ರವಾಹದಲ್ಲಿ ಪುತ್ರಿ ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಹೆತ್ತವರು

Update: 2018-12-25 16:39 GMT

ಅಲಿಗಢ್, ಡಿ.25: 2013ರಲ್ಲಿ ಕೇದರನಾಥ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 17ರ ಹರೆಯದ ವಿಶೇಷ ಚೇತನ ಬಾಲಕಿ ಐದು ವರ್ಷಗಳ ನಂತರ ತನ್ನ ಕುಟುಂಬ ಸೇರಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

2013ರಲ್ಲಿ ಅಲಿಗಢ್ನ ಚಂಚಲ ಎಂಬ 12ರ ಹರೆಯದ ಬಾಲಕಿ ತನ್ನ ಹೆತ್ತವರೊಂದಿಗೆ ಕೇದರನಾಥಕ್ಕೆ ಯಾತ್ರೆಗೆ ತೆರಳಿದ್ದಳು. ಇದೇ ಸಮಯದಲ್ಲಿ ಕೇದರನಾಥದಲ್ಲಿ ಅವ್ಯಾಹತ ಮಳೆ ಸುರಿದು ಉಂಟಾದ ಪ್ರವಾಹದಲ್ಲಿ ಚಂಚಲಳ ತಂದೆ ಕೊಚ್ಚಿ ಹೋಗಿದ್ದರೆ, ತಾಯಿ ಸ್ವಲ್ಪ ಸಮಯದ ನಂತರ ಮನೆ ಸೇರಿದ್ದರು. ಇದೇ ವೇಳೆ ಚಂಚಲ ಈ ದುರಂತದಲ್ಲಿ ಮೃತಪಟ್ಟಿದ್ದಾಳೆ ಎಂದೇ ಭಾವಿಸಲಾಗಿತ್ತು ಎಂದು ಆಕೆಯ ಅಜ್ಜ ಹರೀಶ್ ಚಂದ್ ತಿಳಿಸಿದ್ದಾರೆ. ಆದರೆ ಚಂಚಲ ಈ ಪ್ರವಾಹದಲ್ಲಿ ಬದುಕುಳಿದಿದ್ದು ಆಕೆಯ ರಕ್ಷಕರು ಆಕೆಯನ್ನು ಜಮ್ಮುವಿನ ಅನಾಥಾಶ್ರಮಕ್ಕೆ ಸೇರಿಸಿದ್ದರು.

ಕೆಲ ಸಮಯದಿಂದ ಚಂಚಲ ತನ್ನದೇ ತೊದಲು ಭಾಷೆಯಲ್ಲಿ ಅಲಿಗಡದ ಬಗ್ಗೆ ಏನನ್ನೋ ಹೇಳುತ್ತಿರುವುದನ್ನು ಗಮನಿಸಿದ ಅನಾಥಾಶ್ರಮದ ಆಡಳಿತವರ್ಗ ಅಲಿಗಡದ ಶಾಸಕ ಸಂಜೀವ್ ರಾಜಾ ಅವರನ್ನು ಸಂಪರ್ಕಿಸಿ ಸಹಾಯಕ್ಕೆ ಮನವಿ ಮಾಡಿದ್ದರು. ರಾಜಾ, ಈ ಬಗ್ಗೆ ಅಲಿಗಡದ ಮಕ್ಕಳ ಸಹಾಯವಾಣಿ ಎನ್‌ಜಿಒದ ನಿರ್ದೇಶಕ ಗ್ಯಾನೇಂದ್ರ ಮಿಶ್ರಾ ಅವರಿಗೆ ತಿಳಿಸಿ ಅವರ ಮೂಲಕ ಬಾಲಕಿಯ ಕುಟುಂಬ ವರ್ಗವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಚಂಚಲ ಮರಳಿ ಮನೆಗೆ ಆಗಮಿಸಿರುವುದರಿಂದ ಆನಂದಿತರಾಗಿರುವ ಆಕೆಯ ಅಜ್ಜ ಮತ್ತು ಅಜ್ಜಿ, ಇದು ಯಾವುದೇ ಚಮತ್ಕಾರಕ್ಕಿಂತ ಕಡಿಮೆಯಲ್ಲ ಎಂದು ಉದ್ಗರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News