ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣ: ಪೊಲೀಸ್ ಅಧಿಕಾರಿ ಬಂಧನ

Update: 2018-12-26 16:42 GMT

ಅಗರ್ತಲ, ಡಿ.26: ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿರುವುದಾಗಿ ತ್ರಿಪುರ ಪೊಲೀಸರು ತಿಳಿಸಿದ್ದಾರೆ. ಸ್ಪೆಷಲ್ ಬ್ರಾಂಚ್‌ನ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಸುಶೀಲ್ ಡೆಬರ್ಮರ ಮನೆಗೆ ಮಂಗಳವಾರ ನಡೆದ ಪೊಲೀಸ್ ದಾಳಿಯ ಸಂದರ್ಭ ಅವರ ಮನೆಯಿಂದ 10.01 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಮಾದಕ ದ್ರವ್ಯ ಪೂರೈಕೆ ಪ್ರಕರಣಕ್ಕೆ ಸೇರಿದ ಹಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಹಾಗೂ ಮಾದಕದ್ರವ್ಯದ ಹಾವಳಿಯನ್ನು ತಡೆಗಟ್ಟಲು ಕಳೆದ ಜೂನ್ 27ರಂದು ಅಭಿಯಾನ ಆರಂಭಿಸಿದ್ದ ಪಶ್ಚಿಮ ಅಗರ್ತಲ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಸಂದರ್ಭದಲ್ಲಿ ಮಾಧವಿ ಡೆಬರ್ಮ ಎಂಬಾಕೆ ನಗರದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಜಾಲದ ಪ್ರಧಾನ ಸೂತ್ರಧಾರಿ ಎಂಬುದು ಬೆಳಕಿಗೆ ಬಂದಿತ್ತು. ಇದರಂತೆ ಮಂಗಳವಾರ (ಡಿ.24ರಂದು) ರಾತ್ರಿ ಪೊಲೀಸರ ತಂಡವೊಂದು ಕೃಷ್ಣನಗರ ಪ್ರದೇಶದಲ್ಲಿರುವ ಮಾಧವಿ ಡೆಬ್ರಾಮ ಮನೆಗೆ ದಾಳಿ ನಡೆಸಿ ಆಕೆಯನ್ನು ಬಂಧಿಸಿತ್ತು.

ಮಾದಕದ್ರವ್ಯ ಕಳ್ಳಸಾಗಣೆ ವ್ಯವಹಾರದಲ್ಲಿ ತಾನು ಶಾಮೀಲಾಗಿರುವುದನ್ನು ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದ ಮಾಧವಿ, ಈ ವ್ಯವಹಾರದಿಂದ ತಾನು ಸಂಗ್ರಹಿಸಿದ ಹಣವನ್ನು ಸಂಗಾತಿ ಕ್ಲಬ್ ಪ್ರದೇಶದಲ್ಲಿರುವ ತನ್ನ ಭಾವ(ಅಕ್ಕನ ಗಂಡ)ನ ಮನೆಯಲ್ಲಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಳು. ಆಕೆ ಹೇಳಿದ ಮನೆ ಸ್ಪೆಷಲ್ ಬ್ರಾಂಚ್‌ನ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಸುಶೀಲ್ ಡೆಬ್ರಾಮರ ಮನೆಯಾಗಿತ್ತು. ಆ ಮನೆಗೆ ದಾಳಿ ನಡೆಸಿ 10.01 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಸುಶೀಲ್ ಹಾಗೂ ಮಾಧವಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News