ರೊಮ್ಯಾನ್ಸ್, ಹೀರೋಯಿಸಂ ಮೂಲಕ ದ್ವೇಷ ಹರಡಿದ ಠಾಕ್ರೆ ಟ್ರೈಲರ್: ತಮಿಳು ನಟ ಸಿದ್ಧಾರ್ಥ್ ಆಕ್ರೋಶ

Update: 2018-12-27 11:30 GMT

ಮುಂಬೈ, ಡಿ.27: ಶಿವಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ ಅವರ ಜೀವನಾಧರಿತ `ಠಾಕ್ರೆ' ಮರಾಠಿ ಚಿತ್ರದ ಟ್ರೈಲರ್ ವಿವಾದದ ಧೂಳೆಬ್ಬಿಸಿದೆ. ಈ ಟ್ರೈಲರ್ ದಕ್ಷಿಣ ಭಾರತೀಯರ ವಿರುದ್ಧ `ದ್ವೇಷ' ಹರಡುತ್ತಿದೆ ಎಂದು ತಮಿಳು ನಟ ಸಿದ್ಧಾರ್ಥ್ ಸಹಿತ ಹಲವರು ಅದರ ವಿರುದ್ಧ ಕಿಡಿ ಕಾರಿದ್ದಾರೆ.

ಚಿತ್ರದ ಹಿಂದಿ ಟ್ರೇಲರ್ ನಿಂದ ನಾಪತ್ತೆಯಾಗಿರುವ ಮರಾಠಿ ಟ್ರೇಲರ್ ನ ಒಂದು ದೃಶ್ಯದಲ್ಲಿ ಬಾಳ್ ಠಾಕ್ರೆ ಪಾತ್ರಧಾರಿ ನವಾಝುದ್ದೀನ್ ಸಿದ್ದಿಕಿ ದಕ್ಷಿಣ ಭಾರತೀಯರನ್ನು `ಸಾಲೆ ಯಂಡುಗುಂಡು' ಎಂದು  ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುವಾಗ ಹೇಳಿರುವುದು ಹಾಗೂ ``ಉಠಾವೋ ಲುಂಗಿ, ಬಜಾವೋ ಪುಂಗಿ'' ಎಂದು ಹೇಳಿ ಭಾಷಣವನ್ನು ಕೊನೆಗೊಳಿಸಿರುವುದು ವಿವಾದಕ್ಕೀಡಾಗಿದೆ.

ಇದನ್ನು ಟೀಕಿಸಿ ಟ್ವೀಟ್ ಮಾಡಿದ ಸಿದ್ಧಾರ್ಥ್ “ಅನುಕೂಲಕ್ಕಾಗಿ ಸಬ್- ಟೈಟಲ್ ಮಾಡದ #ಠಾಕ್ರೆಯ #ಮರಾಠಿ ಟ್ರೇಲರ್. ಇಷ್ಟೊಂದು ಪ್ರೇಮ ಮತ್ತು ಪೌರುಷದಿಂದ ಇಷ್ಟೊಂದು ದ್ವೇಷವನ್ನು ಮಾರಲಾಗಿದೆ. ಮಿಲಿಯಗಟ್ಟಲೆ ದಕ್ಷಿಣ ಭಾರತೀಯರಿಗೆ  ಹಾಗೂ ಮುಂಬೈಯನ್ನು ಮಹಾನ್ ಆಗಿಸಿರುವ ವಲಸಿಗರಿಗೆ ಯಾವುದೇ ಐಕ್ಯಮತ ತೋರಿಸಲಾಗಿಲ್ಲ''  ಎಂದು ಬರೆದಿದ್ದಾರೆ.

ಚಿತ್ರದ ಎರಡು ಸಂಭಾಷಣೆಗಳಿಗೆ ಸಿಬಿಎಫ್‍ಸಿ ಆಕ್ಷೇಪ ವ್ಯಕ್ತಪಡಿಸಿ ಕೆಲವೊಂದು ಬದಲಾವಣೆಗಳಿಗೆ ಸಲಹೆ ನೀಡಿದೆ.  ಚಿತ್ರದ ನಿರ್ಮಾಪಕರಾಗಿರುವ ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿ ``ಒಬ್ಬ ಠಾಕ್ರೆಯನ್ನು ನಿಲ್ಲಿಸುವ ಧೈರ್ಯ ಯಾರಿಗೂ ಇಲ್ಲ, ಭವಿಷ್ಯದಲ್ಲೂ ಆತನನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಬಾಳಾ ಸಾಜೇನ್ ಹೇಗಿದ್ದರೋ ಹಾಗೆಯೇ ಈ ಚಿತ್ರ ಇದೆ'' ಎಂದಿದ್ದಾರೆ.           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News