ಪೋಕ್ಸೊ ಕಾಯ್ದೆ ಮತ್ತಷ್ಟು ಕಠಿಣ: ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳಕ್ಕೆ ಗಲ್ಲು
ಹೊಸದಿಲ್ಲಿ,ಡಿ.28: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು 18 ವರ್ಷಕ್ಕಿಂತ ಕೆಳಗಿನ ಮಕ್ಕಳ ವಿರುದ್ಧ ಗಂಭೀರ ಸ್ವರೂಪದ ಲೈಂಗಿಕ ಕಿರುಕುಳಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸುವ ತಿದ್ದುಪಡಿಯನ್ನು ಶುಕ್ರವಾರ ಸಂಪುಟ ಅಂಗೀಕರಿಸಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಮಕ್ಕಳ ಲೈಂಗಿಕ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಪೋಕ್ಸೊ ಕಾಯ್ದೆಯ ವಿಧಿ 4,5 ಮತ್ತು 6ಕ್ಕೆ ತಿದ್ದುಪಡಿ ತರಲಾಗಿದ್ದು ಅಪರಾಧಿಗೆ ಮರಣ ದಂಡನೆ ಸೇರಿದಂತೆ ಅನೇಕ ಕಠಿಣ ಶಿಕ್ಷೆಗಳನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇವುಗಳ ಜೊತೆಗೆ, ನೈಸರ್ಗಿಕ ದುರಂತಗಳು ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಮತ್ತು ಲೈಂಗಿಕ ಶೋಷಣೆ ನಡೆಸುವ ಉದ್ದೇಶದಿಂದ ಶೀಘ್ರ ವಯೋಮಾನಕ್ಕೆ ಬರಲು ನೀಡಲಾಗುವಂತ ಹಾರ್ಮೊನ್‌ಗಳು ಮತ್ತು ರಸಾಯನಿಕ ವಸ್ತುಗಳಿಂದಲೂ ಮಕ್ಕಳಿಗೆ ರಕ್ಷಣೆ ನೀಡುವ ಸಲಹೆಯನ್ನು ಈ ತಿದ್ದುಪಡಿಯಲ್ಲಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ತಡೆಯುವ ನಿಟ್ಟಿನಲ್ಲಿ, ಇಂಥ ಅಶ್ಲೀಲ ಚಿತ್ರಗಳನ್ನು ಅಳಿಸದ, ನಾಶಗೊಳಿಸದ ಅಥವಾ ವರದಿ ಮಾಡದ ತಪ್ಪಿಗೆ ದಂಡವನ್ನು ವಿಧಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.