‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ನಿಷೇಧವಿಲ್ಲ: ಮಧ್ಯ ಪ್ರದೇಶ ಸರಕಾರ

Update: 2018-12-28 14:10 GMT

ಭೋಪಾಲ,ಡಿ.28: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತ ಸಿನೆಮಾ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಪ್ರದರ್ಶನಕ್ಕೆ ರಾಜ್ಯದಲ್ಲಿ ನಿಷೇಧ ಹೇರುವುದಿಲ್ಲ ಎಂದು ಮಧ್ಯ ಪ್ರದೇಶ ಸರಕಾರ ತಿಳಿಸಿದೆ. ಮಾಧ್ಯಮಗಳಲ್ಲಿ ಮಾಡಲಾಗಿರುವ ವರದಿ ನಿಜವಲ್ಲ. ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾವನ್ನು ಸರಕಾರ ನಿಷೇಧಿಸಿಲ್ಲ ಎಂದು ಮಧ್ಯ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಹತ್ತು ವರ್ಷಗಳ ಅವಧಿಯ ಕತೆಯನ್ನು ಹೊಂದಿರುವ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌’ನಲ್ಲಿ ಅನುಪಮ್ ಖೇರ್ ಸಿಂಗ್ ಪಾತ್ರವನ್ನು ನಿಬಾಯಿಸಿದ್ದಾರೆ. ಈ ಸಿನೆಮಾದಲ್ಲಿ ನಿಜಾಂಶವನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿದೆ. ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಬರೆದಿರುವ ಅದೇ ಹೆಸರಿನ ಪುಸ್ತಕವನ್ನಾಧರಿಸಿ ಈ ಸಿನೆಮಾವನ್ನು ನಿರ್ಮಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಸಿನೆಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಸಿನೆಮಾದ ಟ್ರೇಲರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸೈಯ್ಯದ್ ಝಫರ್, ಈ ಸಿನೆಮಾವನ್ನು ತಾನು ನೋಡದೆ ಮಧ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಿನೆಮಾದಲ್ಲಿ ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದ ಸಂತ್ರಸ್ತ ಎಂದು ತೋರಿಸಲಾಗಿದೆ. ಈ ಚಿತ್ರವನ್ನು ಕಾಂಗ್ರೆಸ್ ನಾಯಕರಿಗೆ ತೋರಿಸದೆ ಬಿಡುಗಡೆ ಮಾಡಿದರೆ ಅದನ್ನು ತಡೆಯಲು ಇತರ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಯುವ ಕಾಂಗ್ರೆಸ್ ಎಚ್ಚರಿಸಿದೆ. ಇದೇ ವೇಳೆ, ಒಂದು ಕುಟುಂಬ ಹತ್ತು ವರ್ಷಗಳ ಕಾಲ ಇಡೀ ದೇಶವನ್ನು ಹೇಗೆ ತನ್ನ ಮುಷ್ಠಿಯಲ್ಲಿಟ್ಟಿತ್ತು ಎನ್ನುವುದರ ಕತೆಯನ್ನು ಈ ಸಿನೆಮಾ ಹೊಂದಿದೆ ಎಂದು ಬಿಜೆಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News