ಭಾರತದಿಂದ ಭೂತಾನ್ ಗೆ 4,500 ಕೊ.ರೂ.ಆರ್ಥಿಕ ನೆರವು ಘೋಷಣೆ

Update: 2018-12-28 14:39 GMT

ಹೊಸದಿಲ್ಲಿ,ಡಿ.28: ಶುಕ್ರವಾರ ಇಲ್ಲಿ ಭೂತಾನ್ ಪ್ರಧಾನಿ ಲೋತೆಯ್ ಶೆರಿಂಗ್ ಅವರೊಂದಿಗೆ ಮಾತುಕತೆಗಳನ್ನು ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಆ ರಾಷ್ಟ್ರದ 12ನೇ ಪಂಚವಾರ್ಷಿಕ ಯೋಜನೆಗಾಗಿ 4,500 ಕೋ.ರೂ.ಗಳ ಆರ್ಥಿಕ ನೆರವನ್ನು ಪ್ರಕಟಿಸಿದರು.

 ಭೂತಾನ್‌ನಲ್ಲಿ ಜಲವಿದ್ಯುತ್ ಸಹಕಾರವು ದ್ವಿಪಕ್ಷೆಯ ಸಂಬಂಧಗಳಲ್ಲಿ ಪ್ರಮುಖ ಅಂಶವಾಗಿದೆ ಮತ್ತು ಮಂಗ್ದೆಛು ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಮೋದಿ ಹೇಳಿಕೆಯಲ್ಲಿ ತಿಳಿಸಿದರು.

ಶೆರಿಂಗ್ ಗುರುವಾರ ಭಾರತಕ್ಕೆ ಆಗಮಿಸಿದ್ದು,ಇದು ಕಳೆದ ತಿಂಗಳು ಭೂತಾನಿನ ಪ್ರದಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವಿದೇಶ ಪ್ರವಾಸವಾಗಿದೆ.

ಭೂತಾನದ ನಂಬಿಕಸ್ಥ ಸ್ನೇಹಿತನಾಗಿ ಆ ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾರತವು ಪ್ರಮುಖ ಪಾತ್ರವನ್ನು ಮುಂದುವರಿಸಲಿದೆ ಎಂದು ತಾನು ಶೆರಿಂಗ್ ಅವರಿಗೆ ಭರವಸೆ ನೀಡಿರುವುದಾಗಿ ಮೋದಿ ತಿಳಿಸಿದರು. ಇದೇ ವೇಳೆ ಶೆರಿಂಗ್ ತನ್ನ ರಾಷ್ಟ್ರದ ಅಭಿವೃದ್ಧಿ ಅಗತ್ಯಗಳಲ್ಲಿ ಭಾರತದ ನಿರಂತರ ಬೆಂಬಲಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೂ ಶುಕ್ರವಾರ ಬೆಳಿಗ್ಗೆ ಶೆರಿಂಗ್ ಜೊತೆ ಮಾತುಕತೆಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News