×
Ad

ಬುಲಂದ್‌ಶಹರ್: ಎಸ್ಸೈಗೆ ಗುಂಡಿಕ್ಕುವ ಮೊದಲು ಕೊಡಲಿಯಿಂದ ಹೆಬ್ಬೆರಳು ಕತ್ತರಿಸಿದ್ದ ದುಷ್ಕರ್ಮಿಗಳು

Update: 2018-12-28 20:17 IST

ಲಕ್ನೊ, ಡಿ.28: ಗೋ ಹತ್ಯೆ ಮಾಡಲಾಗಿದೆ ಎಂಬ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡುವ ಮುನ್ನ ದುಷ್ಕರ್ಮಿಗಳು ಅವರ ಮೇಲೆ ಕೊಡಲಿ, ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಕೊಡಲಿ ಏಟಿನಿಂದ ಅವರ ಹೆಬ್ಬೆರಳು ತುಂಡಾಗಿತ್ತು ಮತ್ತು ತಲೆಗೆ ತೀವ್ರ ಗಾಯವಾಗಿತ್ತು. ಬಳಿಕ ಅವರದೇ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಅದರಿಂದ ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಪೊಲೀಸ್ ಜೀಪಿಗೆ ಬೆಂಕಿ ಹಚ್ಚುವ ಪ್ರಯತ್ನವನ್ನೂ ನಡೆಸಲಾಗಿತ್ತು. ಇತ್ತೀಚೆಗೆ ಪೊಲೀಸರು ಬಂಧಿಸಿರುವ ಪ್ರಮುಖ ಆರೋಪಿ ಪ್ರಶಾಂತ್ ನಟ್ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಭಯಾನಕ ಹತ್ಯೆಯ ವಿವರವನ್ನು ಬಿಚ್ಚಿಟ್ಟಿದ್ದಾನೆ. ತಾನು ಸುಬೋಧ್ ಕುಮಾರ್ ಮೇಲೆ ಗುಂಡು ಹಾರಿಸಿರುವುದನ್ನು ಪ್ರಶಾಂತ್ ಒಪ್ಪಿಕೊಂಡಿದ್ದಾನೆ ಎಂದು ಉ.ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಓಲಾ ಕ್ಯಾಬ್‌ನಲ್ಲಿ ಚಾಲಕನ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಗ್ರೇಟರ್ ನೊಯ್ಡಾದಲ್ಲಿರುವ ತನ್ನ ಮಾವನ ಮನೆಯಲ್ಲಿ ಅಡಗಿಕೊಂಡಿದ್ದ. ಆತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 3ರಂದು ಬುಲಂದ್‌ಶಹರ್ ಗ್ರಾಮದ ಅರಣ್ಯದಲ್ಲಿ ದನಗಳ ಮೃತದೇಹ ಪತ್ತೆಯಾಗಿತ್ತು. ಇಲ್ಲಿ ಗೋಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದ ಬಲಪಂಥೀಯ ಸಂಘಟನೆಯವರು ರಸ್ತೆಗೆ ಮರ ಅಡ್ಡಹಾಕಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಉದ್ರಿಕ್ತ ಜನರನ್ನು ಸಮಾಧಾನಪಡಿಸಲು ಮುಂದಾಗಿದ್ದ ಸುಬೋಧ್ ಕುಮಾರ್ ಮೇಲೆ ಕಲ್ವಾ ಎಂಬಾತ ಕೊಡಲಿಯಿಂದ ದಾಳಿ ನಡೆಸಿ ಹೆಬ್ಬೆರಳು ಕತ್ತರಿಸಿದ್ದ. ಗಾಯಗೊಂಡ ಸುಬೋಧ್ ಕುಮಾರ್ ಹತ್ತಿರದಲ್ಲಿದ್ದ ಕಾನ್‌ಸ್ಟೇಬಲ್‌ನ ಕೈಯಲ್ಲಿದ್ದ ರೈಫಲ್ ಕಿತ್ತುಕೊಂಡು ಗುಂಪನ್ನು ಚದುರಿಸಲು ಯತ್ನಿಸಿದಾಗ ಅವರ ತಲೆಯ ಮೇಲೆ ಕೊಡಲಿಯಿಂದ ಹೊಡೆಯಲಾಗಿದೆ. ಬಳಿಕ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲೆಸೆಯತೊಡಗಿದರು.

ಈ ಹಂತದಲ್ಲಿ ಗುಂಪಿನಿಂದ ತಪ್ಪಿಸಿಕೊಂಡು ಓಡಿಹೋಗಲು ಪೊಲೀಸರು ಪ್ರಯತ್ನಿಸಿದಾಗ ಆರೋಪಿ ಪ್ರಶಾಂತ್ ನಟ್ ಪೊಲೀಸ್ ಅಧಿಕಾರಿಯನ್ನು ಹಿಡಿದುಕೊಂಡಿದ್ದಾನೆ. ಆಗ ಸ್ಥಳೀಯ ಯುವಕ ಸುಮಿತ್ ಎಂಬಾತ ಮೊದಲು ಗುಂಡು ಹಾರಿಸಿದ್ದಾನೆ. ನಂತರ ಅಧಿಕಾರಿಯ ರೈಫಲ್ ಅನ್ನು ಕಿತ್ತುಕೊಂಡ ಪ್ರಶಾಂತ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ವಾ ಇನ್ನೂ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News