ಭ್ರಷ್ಟಾಚಾರ ಆರೋಪ: ಉ.ಪ್ರದೇಶ ಸಚಿವಾಲಯದ ಮೂವರು ಸಿಬ್ಬಂದಿ ಅಮಾನತು
ಲಕ್ನೊ, ಡಿ.28: ಖಾಸಗಿ ಸುದ್ದಿವಾಹಿನಿ ನಡೆಸಿದ್ದ ಕುಟುಕು ಕಾರ್ಯಾಚರಣೆ ಸಂದರ್ಭ ಬೆಳಕಿಗೆ ಬಂದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಸಚಿವಾಲಯದ ಮೂವರು ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ಸರಕಾರದ ಪ್ರಕಟನೆ ತಿಳಿಸಿದೆ.
ಈ ಮೂವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದಾರೆ. ಅಲ್ಲದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸೂಚನೆಯಂತೆ ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಸಿಟ್)ಗೆ ವಹಿಸಲಾಗಿದ್ದು , ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡು 10 ದಿನದೊಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ನೊ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ‘ಸಿಟ್’ನ ನೇತೃತ್ವ ವಹಿಸಿದ್ದಾರೆ.
ವರ್ಗಾವಣೆ ಹಾಗೂ ಸರಕಾರಿ ಕಾಮಗಾರಿಗಳ ಗುತ್ತಿಗೆ ವಿಷಯದಲ್ಲಿ ಸಚಿವಾಲಯದ ಮೂವರು ಸಿಬ್ಬಂದಿ ಲಂಚ ಪಡೆಯುತ್ತಿರುವುದು ಖಾಸಗಿ ಟಿವಿ ಚಾನೆಲ್ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಹಿಂದುಳಿದ ವರ್ಗದವರ ಕಲ್ಯಾಣ ಇಲಾಖೆಯ ಆಪ್ತ ಕಾರ್ಯದರ್ಶಿ ಓಂಪ್ರಕಾಶ್ ಕಶ್ಯಪ್ ವರ್ಗಾವಣೆ ಮಾಡಿಕೊಡಲು 40 ಲಕ್ಷ ರೂ. ಲಂಚದ ಬೇಡಿಕೆ ಮುಂದಿರಿಸಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಕಾರ್ಯದರ್ಶಿಯನ್ನು ವಜಾಗೊಳಿಸಿದ್ದು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಸಚಿವರು ತಿಳಿಸಿದ್ದಾರೆ.
ಗಣಿ ಇಲಾಖೆಯ ಸಹಾಯಕ ಸಚಿವೆ ಅರ್ಚನಾ ಪಾಂಡೆಯ ಸಹಾಯಕಿ, ಗುರುತು ಮರೆಸಿ ಬಂದಿದ್ದ ಟಿವಿ ಚಾನೆಲ್‌ನ ವರದಿಗಾರನಿಗೆ ಆರು ಜಿಲ್ಲೆಗಳ ಗಣಿ ಗುತ್ತಿಗೆ ವಹಿಸಿಕೊಡಲು ಭಾರೀ ಮೊತ್ತದ ಲಂಚದ ಬೇಡಿಕೆ ಇರಿಸಿದ್ದರೆ, ಪ್ರಾಥಮಿಕ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಸಂತೋಷ್ ಅವಸ್ಥಿ ಇಲಾಖೆಗೆ ಅಗತ್ಯವಿರುವ ಪುಸ್ತಕಗಳು, ಶಾಲಾ ಬ್ಯಾಗ್, ಸಮವಸ್ತ್ರ ಸರಬರಾಜಿನ ಗುತ್ತಿಗೆ ಮಂಜೂರು ಮಾಡಲು ಲಂಚದ ಬೇಡಿಕೆ ಮುಂದಿರಿಸಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಸರಕಾರ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶತೆ ತೋರಬೇಕು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.