×
Ad

ಉತ್ತರಪ್ರದೇಶ: ಪ್ರಧಾನಿ ರ‍್ಯಾಲಿ ಬಳಿಕ ನಡೆದ ಕಲ್ಲು ತೂರಾಟದಲ್ಲಿ ಕಾನ್ಸ್‌ಟೆಬಲ್ ಸಾವು

Update: 2018-12-29 22:19 IST

ಲಕ್ನೋ, ಡಿ. 29: ರಾಜ್ಯದ ಪೂರ್ವ ಜಿಲ್ಲೆಯಲ್ಲಿ ಶನಿವಾರ ರ‍್ಯಾಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಕೇವಲ ಎರಡು ಗಂಟೆಗಳ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಎಸೆದ ಕಲ್ಲಿಗೆ ಘಾಝಿಪುರದ ಪೊಲೀಸ್ ಕಾನ್ಸ್‌ಟೆಬಲ್ ಮೃತಪಟ್ಟಿದ್ದಾರೆ.

ಉತ್ತರಪ್ರದೇಶದಲ್ಲಿ ಗುಂಪಿನಿಂದ ಪೊಲೀಸ್ ಹತ್ಯೆಗೀಡಾಗುವುದು ಈ ತಿಂಗಳಲ್ಲಿ ನಡೆದ ಎರಡನೇ ಘಟನೆ. ಗೋ ಹತ್ಯೆ ವದಂತಿ ಹಿನ್ನೆಲೆಯಲ್ಲಿ ಈ ಹಿಂದೆ ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರದ ಸಂದರ್ಭ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಘಾಝಿಪುರದಲ್ಲಿ ಹತ್ಯೆಯಾದ ಪೊಲೀಸ್ ಕಾನ್ಸ್‌ಟೆಬಲ್ ಅನ್ನು ಸುರೇಶ್ ವತ್ಸ್ ಎಂದು ಗುರುತಿಸಲಾಗಿದೆ.

ಜಿಲ್ಲೆಯ ನೋನ್‌ಹಾರಾ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದ ಸುರೇಶ್ ವತ್ಸ್ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಕರ್ತವ್ಯ ಮುಗಿಸಿಕೊಂಡು ಅಪರಾಹ್ನ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರಧಾನಿ ರ‍್ಯಾಲಿ ಹಿನ್ನೆಲೆಯಲ್ಲಿ ನಿಶಾದ್ ಸಮುದಾಯದವರು ಮೀಸಲಾತಿಗೆ ಆಗ್ರಹಿಸಿ ಹೆದ್ದಾರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಸುರೇಶ್ ಅವರನ್ನು ಒಳಗೊಂಡಿದ್ದ ಪೊಲೀಸರ ತಂಡ ಅಲ್ಲಿಗೆ ತೆರಳಿ ಪ್ರತಿಭಟನಕಾರರನ್ನು ತೆರವು ಗೊಳಿಸಲು ಪ್ರಯತ್ನಿಸಿತು. ಈ ಸಂದರ್ಭ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಕಲ್ಲೇಟಿನಿಂದ ಸುರೇಶ್ ಗಂಭೀರ ಗಾಯಗೊಂಡು ಅನಂತರ ಮೃತಪಟ್ಟರು.

ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಜಿಲ್ಲಾ ದಂಡಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧೀಕ್ಷರಿಗೆ ಸೂಚನೆ ನೀಡಿದ್ದಾರೆ. ಕಾನ್ಸ್‌ಟೆಬಲ್ ಸುರೇಶ್ ವತ್ಸ್ ಅವರ ಪತ್ನಿಗೆ 40 ಲಕ್ಷ ರೂ. ಹಾಗೂ ಹೆತ್ತವರಿಗೆ 10 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News