ಅಫ್ಘಾನ್‌ನಿಂದ ಅಮೆರಿಕ ಸೇನೆ ಹಿಂದೆಗೆತಕ್ಕೆ ಟ್ರಂಪ್ ಆದೇಶಿಸಿಲ್ಲ

Update: 2018-12-29 17:15 GMT

ವಾಶಿಂಗ್ಟನ್,ಡಿ.29: ಅಫ್ಘಾನಿಸ್ತಾನದಿಂದ ಅಮೆರಿಕದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿಲ್ಲವೆಂದು ಶ್ವೇತಭವನದ ವಕ್ತಾರರೊಬ್ಬರು ರವಿವಾರ ತಿಳಿಸಿದ್ದಾರೆ. ಸಂಘರ್ಷ ಪೀಡಿತ ಅಫ್ಘಾನಿಸ್ತಾನದಿಂದ 7 ಸಾವಿರ ಅಮೆರಿಕನ್ ಯೋಧರನ್ನು ವಾಪಸ್ ಕರೆಸಿಕೊಳ್ಳುವಂತೆ ಟ್ರಂಪ್ ಆದೇಶಿಸಿದ್ದಾರೆಂದು ಕಳೆದ ವಾರ ಪ್ರಕಟವಾದ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

 ಅಪ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಅಮೆರಿಕ ಅಧ್ಯಕ್ಷರು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಹಾಗೂ ಅಫ್ಘಾನಿಸ್ತಾನದಿಂದ ಅಮೆರಿಕನ್ ಸೇನೆಯ ವಾಪಸಾತಿ ಪ್ರಕ್ರಿಯೆಯನ್ನು ರಕ್ಷಣಾ ಇಲಾಖೆಗೆ ಅವರು ಆದೇಶ ನೀಡಿರಲಿಲ್ಲವೆಂದು, ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಗ್ಯಾರೆಟ್ ಮಾರ್ಕಿಸ್ ತಿಳಿಸಿದ್ದಾರೆ.

ಈ ಮಧ್ಯೆ ಅಫ್ಘಾನಿಸ್ತಾನದಲ್ಲಿನ ಅಂತರ್ ರಾಷ್ಟೀಯ ಪಡೆಗಳ ಅಮೆರಿಕನ್ ಕಮಾಂಡರ್ ಜನರಲ್ ಸ್ಕಾಟ್ ಮಿಲ್ಲರ್ ರವಿವಾರ ಹೇಳಿಕೆಯೊಂದನ್ನು ನೀಡಿ,ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಸೇನೆಯ ಪ್ರಮಾಣದಲ್ಲಿ ಬದಲಾವಣೆ ಮಾಡುವ ಬಗ್ಗೆ ಯಾವುದೇ ಆದೇಶ ತನಗೆ ಬಂದಿಲ್ಲವೆಂದು ಹೇಳಿರುವುದಾಗಿ ವಾಯ್ಸೆ ಆಫ್ ಅಮೆರಿಕ ಸುದ್ದಿಸಂಸ್ಥೆ ವರದಿ ಮಾಡಿದೆ.

ಯುದ್ಧಗ್ರಸ್ತ ಸಿರಿಯದಿಂದ ಅಮೆರಿಕನ್ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಟ್ರಂಪ್ ಕಳೆದ ವಾರ ಕೈಗೊಂಡಿದ್ದ ನಿರ್ಧಾರದ ಬಗ್ಗೆ ಜಾಗತಿಕ ನಾಯಕರು ಹಾಗೂ ಅಮೆರಿಕದ ಉಭಯ ರಾಜಕೀಯ ಪಕ್ಷಗಳು, ಹಿರಿಯ ಸಂಸದರಿಂದಲೂ ವ್ಯಾಪಕ ಕಳವಳ ವ್ಯಕ್ತವಾದ ಬಳಿಕ ಶ್ವೇತಭವನ ಈ ಸ್ಪಷ್ಟನೆ ನೀಡಿದೆ. ಸಿರಿಯದಿಂದ ಅಮೆರಿಕ ಸೇನೆಯ ನಿರ್ಗಮನವನ್ನು ವಿರೋಧಿಸಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ರಾಜೀನಾಮೆ ಘೋಷಿಸಿದ್ದರು. ಅಮೆರಿಕದ ಸೇನಾ ಇತಿಹಾಸದಲ್ಲೇ ಅತ್ಯ ದೀರ್ಘವಾದ ಸಮರವೆನಿಸಿರುವ 17 ವರ್ಷಗಳ ಅಫ್ಘಾನ್ ಯುದ್ಧವನ್ನು ಟ್ರಂಪ್ ತೀವ್ರವಾಗಿ ಟೀಕಿಸಿದ್ದರು. ಅಫ್ಘಾನ್ ಯುದ್ಧದಲ್ಲಿ ಈ ತನಕ ಸುಮಾರು 2,300 ಮಂದಿ ಅಮೆರಿಕನ್ನರು ಪ್ರಾಣತೆತ್ತಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನಕ್ಕೆ ಇನ್ನೂ 4 ಸಾವಿರ ಸೈನಿಕರನ್ನು ಕಳುಹಿಸಲು ಅನುಮತಿ ನೀಡಬೇಕೆಂಬ ತನ್ನ ಸೇನಾ ಸಲಹೆಗಾರರ ಮನವಿಗೆ ಟ್ರಂಪ್ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News