ನಾತಿಚರಾಮಿ: ಬದಲಾಗುವ ನೀತಿಯಲ್ಲಿ ಬಯಲಾಗುವ ಪ್ರೀತಿ

Update: 2018-12-30 09:09 GMT

ಪ್ರೀತಿ ಬಯಲಾಗಬಹುದು ಆದರೆ ಕಾಮ ಅಡಗಿರಬೇಕು ಎನ್ನುವುದು ಮನುಜ ನಿಯಮ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾಮವನ್ನು ತಿಳಿಸಿ ಬದುಕಬೇಕಾದ ಪರಿಸ್ಥಿತಿ ಬಂದರೆ ಸಂಪ್ರದಾಯವಂತರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ನಾತಿಚರಾಮಿ ಚಿತ್ರ. ವಿವಾಹದ ವೇಳೆ ಬಳಸುವ ಮಂತ್ರದ ಸಾಲಲ್ಲಿ ಬರುವ ನಾತಿಚರಾಮಿ ಎಂಬ ಪದಕ್ಕೆ ‘ನಾನು ಪ್ರಮಾಣ ಮಾಡುತ್ತೇನೆ’ ಎಂಬ ಅರ್ಥವಿದೆ. ಆದರೆ ಆ ಪ್ರಮಾಣವನ್ನು ಉಳಿಸುವ ಹಾಗೆಯೇ ಉಳಿಸದಿರುವ ಅನಿವಾರ್ಯತೆ ಹೇಗಿರುತ್ತದೆ ಎನ್ನುವುದನ್ನು ಚಿತ್ರ ತಿಳಿಸುತ್ತದೆ.

ಮದುವೆಯ ಹೊಸದರಲ್ಲೇ ಪತಿಯನ್ನು ಕಳೆದುಕೊಂಡ ಗೌರಿಗೆ ತಂದೆ ತಾಯಿ ಮತ್ತೊಂದು ವಿವಾಹಕ್ಕೆ ಒತ್ತಾಯಿಸುತ್ತಾರೆ. ಆದರೆ ಪ್ರೀತಿಸಿ ಮದುವೆಯಾಗಿದ್ದ ಪತಿಯ ಅನಿರೀಕ್ಷಿತ ಸಾವು ಆಕೆಯನ್ನು ಮತ್ತೊಂದು ಮದುವೆಗೆ ಒಪ್ಪುವಂತೆ ಮಾಡುವುದಿಲ್ಲ. ಅವರು ನೋಡಿದಂಥ ಹುಡುಗನನ್ನು ಕಂಡರೆ ಆಕೆಗೆ ಉರಿದು ಬೀಳುವಂತಿರುತ್ತದೆ. ಆದರೆ ದಿನ ಕಳೆದಂತೆ ಆಕೆ ತನ್ನೊಳಗಿನ ಭೋಗ ಬಯಕೆಗಳ ತೊಳಲಾಟವನ್ನು ತಡೆದುಕೊಳ್ಳಲು ಕಷ್ಟ ಪಡುತ್ತಾಳೆ. ಆಕೆ ಈ ಮನೋವೇದನೆಯ ಪರಿಹಾರಕ್ಕಾಗಿ ಮನಶಾಸ್ತ್ರಜ್ಞರ ಮೊರೆ ಹೋಗಿ ಸಲಹೆ ಪಡೆಯುತ್ತಾಳೆ.

ಇದರ ನಡುವೆ ಆಕೆಗೆ ಸುರೇಶ್ ಎಂಬ ಯುವಕನ ಪರಿಚಯವಾಗುತ್ತದೆ. ಆತ ನೋಡಲು ಸುಂದರಾಂಗ. ಜೊತೆಗೆ ಇತರರಂತೆ ತನ್ನತ್ತ ಕೆಟ್ಟ ಕುತೂಹಲ ತೋರುವುದಿಲ್ಲ ಎಂಬ ಕಾರಣಕ್ಕೆ ಆತನನ್ನು ಇಷ್ಟಪಡುತ್ತಾಳೆ. ಸುರೇಶ ವಿವಾಹಿತ. ಗೌರಿಯ ಬೇಡಿಕೆಗೆ ಆತನ ಪ್ರತಿಕ್ರಿಯೆ ಏನಾಗಿರುತ್ತದೆ ಮತ್ತು ಮುಂದೇನಾಗುತ್ತದೆ ಎನ್ನುವುದು ಚಿತ್ರದ ಕತೆ. ಆದರೆ ಚಿತ್ರ ಹೇಳಿರುವ ಸಂಗತಿಗಳು ಮಾತ್ರ ಚಿತ್ರದ ಕ್ಲೈಮ್ಯಾಕ್ಸ್‌ನಂತೆ ಸರಳವಾದುದಲ್ಲ. ವಿರಳವಾಗಿರುವಂಥದ್ದು.

ಸುರೇಶನ ದಾಂಪತ್ಯ ಬದುಕಿನ ಸನ್ನಿವೇಶಗಳನ್ನು ತೋರಿಸುವ ಮೂಲಕ ಮದುವೆಯಾಗಿ ಐದು ವರ್ಷ ದಾಟಿದ್ದರೂ ಹೇಗೆ ಗಂಡಹೆಂಡತಿ ನಡುವೆ ಸಂಬಂಧಗಳು ಆಪ್ತವಾಗದೇ ಹೋಗಿರುತ್ತವೆ ಎನ್ನುವುದನ್ನು ತೋರಿಸಲಾಗಿದೆ. ಇನ್ನೊಂದು ಕಡೆ ಸುರೇಶನ ಮನೆಗೆಲಸದಾಕೆ ಮೊದಲ ಗಂಡನ ಸಮಸ್ಯೆ ತಾಳದೆ ಆತನನ್ನು ಬಿಟ್ಟು ಮತ್ತೋರ್ವ ಗಂಡನ ಜೊತೆಗೆ ಬಾಳುವುದು ಮತ್ತು ಈಗಲೂ ಹಳೆಯ ಗಂಡನ ಬಗ್ಗೆ ನೆನಪಿಸುವ ಸನ್ನಿವೇಶಗಳಿವೆ. ಹೀಗೆ ಪ್ರತಿಯೊಂದು ಸಂಕೀರ್ಣ ದೃಶ್ಯಗಳು ಕೂಡ ಒಂದೊಂದು ಕತೆಯನ್ನು ತೆರೆದಿಡುತ್ತವೆ. ಎಲ್ಲದರಲ್ಲಿಯೂ ಕೂಡ ಪುರುಷಾಧಿಪತ್ಯದ ಸಂಪ್ರದಾಯದಲ್ಲಿ ಹೆಣ್ಣಿನ ಮೇಲೆ ಸಹಜವೆಂಬಂತೆ ನಡೆಯುವ ದೌರ್ಜನ್ಯವನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.

ಉದಾಹರಣೆಗೆ ತೀರಿಹೋದ ಪತಿಯ ನೆನಪನ್ನು ಸಹಜವಾಗಿ ಮರೆಯುವ ಹಂತದಲ್ಲಿ ಇನ್ನೆಲ್ಲೋ ಆತನ ಪೋಷಕರ ತೃಪ್ತಿಗಾಗಿ ಮತ್ತೆ ನೆನಪನ್ನು ಜತನಗೊಳಿಸಬೇಕಾದ ಗೊಂದಲ, ತನ್ನ ದೇಹದ ಸಮಸ್ಯೆಯನ್ನು ಹೇಳಿಕೊಳ್ಳುವುದು ಕೂಡ ಸಂಸ್ಕಾರ ಶೂನ್ಯತೆ ಎಂದುಕೊಳ್ಳುವ ಗಂಡು, ಮತ್ತೊಂದೆಡೆ ತನಗೆ ಬಯಕೆಯಾದ ಸಂದರ್ಭದಲ್ಲಿ ಮಾತ್ರ ಪತ್ನಿ ಸಿದ್ಧವಾಗಿರಬೇಕು ಎಂದುಕೊಳ್ಳುವ ಪತಿಯ ಪಾತ್ರ ಹೀಗೆ ಸಾಕಷ್ಟು ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ ಸಮಸ್ಯೆಗಳನ್ನು ಸಮಸ್ಯೆಯಾಗಿ ಮಾತ್ರ ನೋಡಬಲ್ಲ ಮನೋವೈದ್ಯರು ಮತ್ತು ಎಲ್ಲವನ್ನೂ ತಾನು ನಿಭಾಯಿಸಬಲ್ಲೆ ಎಂಬ ಮನಸ್ಥಿತಿಯಲ್ಲಿರುವ ಮನೆ ಕೆಲಸದ ಜಯಮ್ಮ ಇಬ್ಬರಲ್ಲೂ ಬದುಕು ಹೇಗೆ ಸರಳವಾಗಿರುತ್ತದೆ ಎಂದು ಕೂಡ ತೋರಿಸಲಾಗಿದೆ.

ಮನೋವೈದ್ಯರ ಮೂಲಕ ಗಿಡಕ್ಕೆ ಕಸಿ ಹಾಕಿಸುವ, ಸಹನಾವಂತೆ ಪತ್ನಿಯಿಂದ ಒಡೆದ ಪಾತ್ರೆಗೆ ತೇಪೆ ಹಾಕಿಸುವ ಸನ್ನಿವೇಶಗಳನ್ನು ಸಾಂದರ್ಭಿಕವಾಗಿ ಸಾಂಕೇತಿಕಗೊಳಿಸಿದ್ದಾರೆ ನಿರ್ದೇಶಕ ಮಂಸೋರೆ. ಅದೇ ರೀತಿ ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದ ಸಂಬಂಧವೊಂದು ಹೇಗೆ ಕತ್ತಲೆಯಲ್ಲೇ ಕರಗಿ ಹೋಗುತ್ತದೆ ಎಂದು ತೋರಿಸಲಾಗಿದೆ. ಆದರೆ ಇದೆಲ್ಲವನ್ನೂ ದಾಟಿ ನಿರ್ದೇಶಕರು ವಿಭಿನ್ನವಾಗಿ ನಿಲ್ಲುವುದು ಕ್ಲೈಮ್ಯಾಕ್ಸ್‌ನಲ್ಲಿ. ಸಮಾಜ ನೀತಿಯಲ್ಲವೆನ್ನುವ ರೀತಿಯಲ್ಲಿನ ದೇಹದ ಸಂಬಂಧ ಕೂಡ, ಹೇಗೆ ಮತ್ತೊಂದೆಡೆ ಸಮಾಜ ಗೌರವಿಸುವಂಥ ಮನಸ್ಥಿತಿಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ ಎನ್ನುವುದನ್ನು ಹೇಳುವಲ್ಲಿ ಅವರು ಗೆದ್ದಿದ್ದಾರೆ.

ಚಿತ್ರದಲ್ಲಿ ಗೌರಿಯ ಪಾತ್ರವಾಗಿ ಶ್ರುತಿ ಹರಿಹರನ್ ಜೀವಿಸಿದ್ದಾರೆ. ಬಹುಶಃ ಪಾತ್ರದಾಚೆಗೂ ಗೌರಿಯ ಸ್ವಾತಂತ್ರ್ಯದ ಬಗ್ಗೆ ತಲೆ ಕೆಡಿಸಿಕೊಂಡಿರಬಹುದು ಎಂಬ ಸಂದೇಹ ವೀಕ್ಷಕರಿಗೆ ಬಂದರೆ ಅಚ್ಚರಿಯಿಲ್ಲ. ಸಂಚಾರಿ ವಿಜಯ್ ತಮ್ಮ ಪಾತ್ರಕ್ಕೆ ಆಕರ್ಷಕವಾಗಿ ನ್ಯಾಯ ಸಲ್ಲಿಸಿದ್ದಾರೆ. ಮನೋವೈದ್ಯರ ಪಾತ್ರದಲ್ಲಿ ಬಾಲಾಜಿ ಮನೋಹರ್ ಸಹಜವಾದ ನಟನೆ ಕಂಡಾಗ ‘ಡಿಯರ್ ಜಿಂದಗಿ’ಯ ಶಾರುಕ್ ಖಾನ್ ನೆನಪಾಗುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ, ಕಲಾ ಗಂಗೋತ್ರಿ ಮಂಜು ಒಂದೆರಡು ದೃಶ್ಯಗಳಲ್ಲೇ ಗಮನ ಸೆಳೆಯುತ್ತಾರೆ. ಬಿಂದು ಮಾಲಿನಿ ಸಂಗೀತದಲ್ಲಿ ‘ಕಣ್ಣಾ ಸಲಿಗೆ’ ಎಂಬ ನಂದಿನಿ ನಂಜಪ್ಪರ ರಚನೆ ಮನಸೆಳೆಯುತ್ತದೆ. ಆದರೆ ಹಿನ್ನೆಲೆ ಸಂಗೀತ ಮತ್ತು ದೃಶ್ಯಗಳು ಕೆಲವೊಮ್ಮೆ ನಮ್ಮನ್ನು ಕೂಡ ನಾಯಕಿಯ ಪಾತ್ರದ ಮನಸ್ಥಿತಿಗಿಂತಲೂ ಬೋರ್ ಹೊಡೆಯುವಂತೆ ಮಾಡಿರುವುದು ನಿಜ. ಆದರೆ ವಯಸ್ಕರು ನೋಡಬೇಕಾದ ಹೊಸತನದ ಚಿತ್ರ ನಾತಿಚರಾಮಿ ಎನ್ನಬಹುದು.


ತಾರಾಗಣ: ಸಂಚಾರಿ ವಿಜಯ್, ಶ್ರುತಿಹರಿಹರನ್
ನಿರ್ದೇಶಕರು: ಮಂಸೋರೆ
ನಿರ್ಮಾಪಕರು: ಜಗನ್ ಮೋಹನ ರೆಡ್ಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News