ದಿಲ್ಲಿ ದರ್ಬಾರ್

Update: 2018-12-29 18:39 GMT

ಅಚ್ಛೇ ದಿನ್ ಪ್ರಶ್ನಿಸಿದ ಜೋಶಿ
ಹಿಂದಿ ಭಾಷೆಯ ಮೂರು ರಾಜ್ಯಗಳಲ್ಲಿ ಬಿಜೆಪಿ ಅನುಭವಿಸಿರುವ ಆಘಾತಕಾರಿ ಸೋಲಿನಿಂದಾಗಿ ಪಕ್ಷದ ಹಲವು ನಾಯಕರು ನಿರಾಳವಾಗಿದ್ದಾರೆ. ಹಲವು ಸಮಯದಿಂದ ಬಾಯಿಗೆ ಬೀಗ ಹಾಕಿಕೊಂಡಿದ್ದ ಹಲವು ನಾಯಕರು ಮತ್ತೆ ಧ್ವನಿ ಎತ್ತುವಂತಾಗಿರುವುದು ಇದಕ್ಕೆ ಕಾರಣ. ಉದಾಹರಣೆಗೆ ಮುರಳಿ ಮನೋಹರ ಜೋಶಿಯವರನ್ನೇ ತೆಗೆದುಕೊಳ್ಳಿ. ಇತ್ತೀಚೆಗೆ ಅವರು ದಿಲ್ಲಿಯಲ್ಲಿ ಅಧಿವೇಶನಕ್ಕಾಗಿ ಸಂಸತ್ತಿಗೆ ಆಗಮಿಸಿದಾಗ ಹಲವು ಮಂದಿ ಪತ್ರಕರ್ತರು ಚುನಾವಣಾ ಫಲಿತಾಂಶದ ಬಗ್ಗೆ ಅವರಿಂದ ಪ್ರತಿಕ್ರಿಯೆ ಬಯಸಿದರು. ಆ ಓಘ ಹೇಗಿತ್ತು ಎಂದರೆ ಒಬ್ಬ ಪತ್ರಕರ್ತರಂತೂ ನೇರವಾಗಿ, ‘‘ಹವಾ ಬಹುತ್ ತೇಝ್ ಹೈ’’ ಎಂದು ಛೇಡಿಸಿದರೆ, ಮತ್ತೊಬ್ಬರು ‘‘ಅಚ್ಛೇ ದಿನ್ ಇಸ್ ಹವಾ ಮೇ ಉಡ್ ನಾ ಜಾಯೆ’’ ಎಂದು ಚುಚ್ಚಿದ್ದರು. ಜೋಶಿ ನೆರೆದಿದ್ದ ಪತ್ರಕರ್ತರಿಂದ ಆಚೆ ನಡೆದರು. ಆದರೆ ಅವರಿಗೆ ತಡೆದುಕೊಳ್ಳಲಾಗಲಿಲ್ಲ. ಪತ್ರಕರ್ತರತ್ತ ಮತ್ತೆ ಬಂದು, ಕಣ್ಣು ಮಿಟುಕಿಸುತ್ತಾ ‘‘ಅಚ್ಛೇ ದಿನ್ ಕಬ್ ಥೇ’’ (ಒಳ್ಳೆಯ ದಿನಗಳು ಎಂದು ಬಂದಿದ್ದವು?) ಎಂದು ಮರು ಪ್ರಶ್ನೆ ಎಸೆದರು. ನೆರೆದಿದ್ದ ಪತ್ರಕರ್ತರು ನಗೆಗಡಲಲ್ಲಿ ತೇಲಿದರು. ಜೋಶಿಯೂ ಮನಸಾರೆ ನಕ್ಕರು. ಈ ಬಗ್ಗೆ ಮೋದಿ ಅಥವಾ ಅಮಿತ್ ಶಾಗೆ ತಿಳಿದರೆ ಬಹುಶಃ ಅದು ಅವರಿಗೆ ಇಷ್ಟವಾಗಲಾರದು. ಹೇಗಿದ್ದರೂ ಜೋಶಿಗೆ 2019ರ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸುವ ನಿರೀಕ್ಷೆಯೇ ಇಲ್ಲ. ಆದರೆ ಇತ್ತೀಚೆಗೆ ಮೂರು ರಾಜ್ಯಗಳ ಸೋಲಿನ ಬಳಿಕ ಮೋದಿ ಹಾಗೂ ಅಮಿತ್ ಶಾ ಹಿನ್ನಡೆ ಅನುಭವಿಸಿರಲೂ ಸಾಕು. ಯಾರಿಗೆ ಗೊತ್ತು?!


ಕಿಶೋರ್ ಕಾರ್ಯತಂತ್ರ
2014ರಲ್ಲಿ ಮೋದಿ ಚುನಾವಣಾ ಪ್ರಚಾರದ ಕಾರ್ಯತಂತ್ರ ಹೆಣೆದು ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಬಳಿಕ ನಿತೀಶ್ ಕುಮಾರ್ ಹಾಗೂ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದರು. ಇದೀಗ 2019ರ ಲೋಕಸಭಾ ಚುನಾವಣೆಯಲ್ಲಿ, ಸಂಯುಕ್ತ ಜನತಾದಳದ ಉಪಾಧ್ಯಕ್ಷ ಪಾತ್ರದಲ್ಲಿ ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿತೀಶ್ ಕುಮಾರ್ ಅವರ ಬಲಗೈ ಬಂಟ ಎನಿಸಿದ ಕಿಶೋರ್, ಬಿಹಾರದಲ್ಲಿ ಎನ್‌ಡಿಎ ತಂತ್ರಗಾರರಾಗಿ ಮತ್ತೆ ಕೈಚಳಕ ತೋರಿದಂತಿದೆ. ಇತ್ತೀಚೆಗೆ ಅವರು ಬಿಹಾರದ ಪಕ್ಷೇತರ ಸಂಸದ ಪಪ್ಪುಯಾದವ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಚಾರ ರಾಜಧಾನಿಯ ಕೆಲ ಪತ್ರಕರ್ತರ ಕಿವಿಗೂ ಬಿದ್ದಿದೆ. ಸಂಸತ್ ಅಧಿವೇಶನದ ಭೋಜನ ವಿರಾಮದ ವೇಳೆ ಈ ಬಗ್ಗೆ ಪತ್ರಕರ್ತರು ಪಪ್ಪು ಅವರನ್ನು ಕೇಳಿದಾಗ, ಪ್ರಶಾಂತ್ ಕಿಶೋರ್ ಭೇಟಿ ಬಗ್ಗೆ ಅವರು ತುಟಿ ಪಿಟಿಕ್ಕೆನ್ನಲಿಲ್ಲ. ಭೇಟಿಯನ್ನು ನಿರಾಕರಿಸದ ಅವರು, ‘‘ಚುನಾವಣೆಗೆ ಮುನ್ನ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ’’ ಎಂದು ಹೇಳಿದರು. ಕಾಂಗ್ರೆಸ್, ಆರ್‌ಎಲ್‌ಎಸ್‌ಪಿ ಜತೆಗೂಡಿ ಕಣಕ್ಕೆ ಧುಮುಕುವ ಹುಮ್ಮಸ್ಸಿನಲ್ಲಿರುವ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಮೈತ್ರಿಕೂಟಕ್ಕೆ ಪರಿಸ್ಥಿತಿ ಕಠಿಣವಾಗುವಂತೆ ಮಾಡಲು ಮೈತ್ರಿಕೂಟ ಹೆಣೆಯುವ ಹೊಣೆಯನ್ನು ನಿತೀಶ್ ಕುಮಾರ್, ಪ್ರಶಾಂತ್ ಕಿಶೋರ್‌ಗೆ ವಹಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಿಶೋರ್, ಪಪ್ಪು ಯಾದವ್ ಅವರನ್ನು ಭೇಟಿ ಮಾಡಿರುವ ಸಾಧ್ಯತೆ ಇದೆ. ಆದರೆ ಇದರ ಫಲಿತಾಂಶ ಏನು ಎನ್ನುವುದು ಪಪ್ಪುಬಾಯಿ ಬಿಟ್ಟ ಬಳಿಕವಷ್ಟೇ ಬಹಿರಂಗವಾಗಬೇಕು.


ರಾಧಾಮೋಹನ್ ಉದಾಸೀನ
ರಾಧಾಮೋಹನ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಕೃಷಿ ಸಚಿವರಾಗಿ ನೇಮಕ ಮಾಡಿದ್ದಾರೆ ಮತ್ತು ಇಷ್ಟು ವರ್ಷ ಹೇಗೆ ಇದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ್ದಾರೆ ಎನ್ನುವುದು ಹಲವು ಮಂದಿಗೆ ಚಿದಂಬರ ರಹಸ್ಯ. ಅದು ಕೂಡಾ ಕೃಷಿ ಕ್ಷೇತ್ರ ತೀವ್ರ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲಿ. ಮೋದಿ ದೊಡ್ಡ ರೈತಪರ ಘೋಷಣೆಯನ್ನು ಸದ್ಯದಲ್ಲೇ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, 2019ರ ಚುನಾವಣೆಯ ಗೆಲುವಿಗಾಗಿ ಇದು ಮೋದಿಯ ಮಾಸ್ಟರ್‌ಸ್ಟ್ರೋಕ್ ಎಂದು ಹೇಳಲಾಗುತ್ತಿದೆ. ಆದರೆ ಈ ಯೋಜನೆ ಯಶಸ್ಸಿನ ಬಗ್ಗೆ ಮೋದಿ ಸರಕಾರದ ಹಲವು ಸಚಿವರಿಗೇ ಅನುಮಾನ ಇದೆ. ಅದು ಯೋಜನೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕಲ್ಲ; ಬದಲಾಗಿ ಈ ಖಾತೆಯ ಸಚಿವರಿಂದಾಗಿ. ಇತ್ತೀಚೆಗೆ ಹಿರಿಯ ಸಚಿವರೊಬ್ಬರು ಪತ್ರಕರ್ತರ ಜತೆ ನಡೆಸಿದ ಆಫ್ ದ ರೆಕಾರ್ಡ್ ಸಂವಾದದಲ್ಲಿ, ಮೋದಿಯವರ ಎಷ್ಟು ಪ್ರಮುಖ ಯೋಜನೆಗಳು ಕೆಟ್ಟ ಅನುಷ್ಠಾನದ ಕಾರಣದಿಂದಾಗಿ ವಿಫಲವಾಗಿವೆ ಎಂದು ವಿವರಿಸಿದರು. ನಿಖರವಾಗಿ ಅವರು ರಾಧಾಮೋಹನ್ ಸಿಂಗ್ ಸಚಿವಾಲಯವನ್ನು ಉದಾಹರಿಸಿದರು. ಸಿಂಗ್ ತೀರಾ ಒಳ್ಳೆಯವರು; ಮೋದಿ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ವಿಚಾರ ಬಂದಾಗ, ಆ ಇಚ್ಛೆ ಇಲ್ಲ ಎನ್ನುತ್ತಾರೆ. ‘ತುಮ್ ಸೇ ನಾ ಹೋ ಪಾಯೇಗಾ’ ಎಂಬ ಹಿಂದಿ ಚಿತ್ರದ ಸಂಭಾಷಣೆಯನ್ನು ಅವರು ಉದಾಹರಿಸಿದರು.


ಮರಳಿ ಬಂದ ರೂಡಿ
ಕೌಶಲ ಅಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಸ್ಥಾನ ಕಳೆದುಕೊಂಡ ರಾಜೀವ್ ಪ್ರತಾಪ್ ರೂಡಿ ಇದೀಗ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರೂಡಿಯವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ. ವೃತ್ತಿಯಲ್ಲಿ ಕಮರ್ಷಿಯಲ್ ಪೈಲಟ್ ಆಗಿರುವ ರೂಡಿ ಕಳೆದ ವರ್ಷ ಪ್ರಯಾಣಿಕರಾಗಿ ಪಟ್ನಾಗೆ ಬಂದಿದ್ದಾಗ, ಶಾ ಕಚೇರಿಯಿಂದ ಕರೆ ಬಂದಿತ್ತು. ಮರು ವಿಮಾನದಲ್ಲೇ ದಿಲ್ಲಿಗೆ ಧಾವಿಸಿದ ಅವರು ಶಾ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದರು. ಆದರೆ ಬಳಿಕ ರೂಡಿ ಅವರಿಗೆ ಮತ್ತೆ ಅದೃಷ್ಟ ಖುಲಾಯಿಸಿದೆ. ಪಕ್ಷದ ನಿಲುವನ್ನು ಸಮರ್ಥವಾಗಿ ಬಿಂಬಿಸುವಂತೆ ಅದೇ ಶಾ ಸೂಚನೆ ನೀಡಿದ್ದಾರೆ. ಬಿಜೆಪಿಗೆ ಇತ್ತೀಚೆಗೆ ಉಂಟಾದ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ರೂಡಿ ಪುನರಾಗಮನ ಪಕ್ಷಕ್ಕೆ ಅನಿವಾರ್ಯವಾಗಿದೆ. ರೂಡಿ ಮರಳಿ ಬರುತ್ತಿದ್ದಂತೆ ಖ್ಯಾತ ವಕ್ತಾರ ಸಂಬಿತ್ ಪಾತ್ರ ಅವರನ್ನು ಪಕ್ಷ ಮೂಲೆಗುಂಪು ಮಾಡಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ವಾಸ್ತವವಾಗಿ ಹಾಗಾಗಿಲ್ಲ ಎಂದು ಹೇಳಲಾಗುತ್ತಿದೆ. ಟಿವಿ ಪರದೆಗಳಲ್ಲಿ ರೂಡಿ ನಿಯತವಾಗಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪಾತ್ರ ಮೂಲೆಗುಂಪಾಗಿದ್ದಾರೆಯೇ ಅಥವಾ ಮತ್ತಷ್ಟು ಪ್ರಬಲರಾಗಿದ್ದಾರೆಯೇ ಎನ್ನುವುದು ತಿಳಿಯುತ್ತದೆ.


ಸಿಂಧಿಯಾ ಸಂತೋಷವಾಗಿದ್ದಾರೆಯೇ?
ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚಿನ ದಿನಗಳಲ್ಲಿ ಅಷ್ಟು ಸಂತೋಷವಾಗಿಲ್ಲ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ತಮ್ಮ ಪ್ರಭಾವ ಇರುವ ಪ್ರದೇಶಗಳಲ್ಲಿ ಅವರು ಉತ್ತಮ ಫಲಿತಾಂಶದ ಮೂಲಕ ಸಾಧಿಸಿ ತೋರಿಸಿದ್ದಾರೆ. ಮುಖ್ಯಮಂತ್ರಿ ಕಮಲ್‌ನಾಥ್ ಅಥವಾ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಅವರ ಪ್ರಭಾವದ ಕ್ಷೇತ್ರಗಳಿಗೆ ಹೋಲಿಸಿದರೆ, ಸಿಂಧಿಯಾ ಪ್ರಭಾವದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಳ್ಳೆಯ ಫಲಿತಾಂಶ ಪಡೆದಿದೆ. ಆದ್ದರಿಂದ ತಮ್ಮನ್ನು ಕಡೆಗಣಿಸಿ ಪಕ್ಷಾಧ್ಯಕ್ಷ ರಾಹುಲ್‌ಗಾಂಧಿ ಕಮಲ್‌ನಾಥ್ ಅವರಿಗೆ ಮಣೆ ಹಾಕಿರುವುದು ಅವರಿಗೆ ಬೇಸರ ತಂದಿದೆ ಎನ್ನಲಾಗಿದೆ. ರಾಹುಲ್ ಅವರ ಜತೆ ಹೊಂದಿರುವ ಸ್ನೇಹಸಂಬಂಧದ ಹಿನ್ನೆಲೆಯಲ್ಲಿ ಅದು ದೊಡ್ಡ ವಿವಾದವಾಗದಿದ್ದರೂ, ಅಸಮಾಧಾನ ಹಾಗೆಯೇ ಉಳಿದುಕೊಂಡಿದೆ. ಸಿಂಧಿಯಾ ಅವರ ಮಹತ್ವಾಕಾಂಕ್ಷೆಗೆ ತಣ್ಣೀರೆರಚುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಎನ್ನಲಾದ ದಿಗ್ವಿಜಯ ಸಿಂಗ್ ಇದೀಗ ತೇಪೆ ಹಾಕಲು ಮುಂದಾಗಿದ್ದಾರೆ. ಇತ್ತೀಚೆಗೆ ಸಿಂಗ್, ಸಿಂಧಿಯಾ ಮನೆಗೆ ಭೇಟಿ ನೀಡಿ ಅವರೊಂದಿಗೆ ಚಹಾ ಸೇವಿಸಿ ಅಸಮಾಧಾನದ ಹೊಗೆ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ ಎಂಬ ವದಂತಿ ರಾಜಧಾನಿಯಲ್ಲಿ ದಟ್ಟವಾಗಿದೆ. ಸಿಂಧಿಯಾ ಮನವೊಲಿಸುವಲ್ಲಿ ಸಿಂಗ್ ಸಫಲರಾದಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News