‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮೃಣಾಲ್ ಸೇನ್ ನಿಧನ

Update: 2018-12-30 18:11 GMT

ಕೋಲ್ಕತಾ, ಡಿ.30: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಖ್ಯಾತ ಬಂಗಾಳಿ ಸಿನೆಮ ನಿರ್ದೇಶಕ ಮೃಣಾಲ್ ಸೇನ್ ತಮ್ಮ ನಿವಾಸದಲ್ಲಿ ವಯಸ್ಸಿನ ಸಂಬಂಧಿತ ಕಾಯಿಲೆಯಿಂದ ರವಿವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ತಮ್ಮ ಸಮಕಾಲೀನರಾದ ಸತ್ಯಜಿತ್ ರೇ, ರಿತ್ವಿಕ್ ಘಾಟಕ್‌ರೊಂದಿಗೆ ಸೇನ್‌ರನ್ನು ವಿಶ್ವಮಟ್ಟದಲ್ಲಿ ಪ್ರಾದೇಶಿಕ ಸಿನೆಮಗಳ ರಾಯಭಾರಿಗಳೆಂದು ಪರಿಗಣಿಸಲಾಗುತ್ತಿತ್ತು. ಈಗ ಬಾಂಗ್ಲಾದೇಶದಲ್ಲಿರುವ ಫರೀದ್‌ಪುರದಲ್ಲಿ 1923ರ ಮೇ 14ರಂದು ಜನಿಸಿದ್ದ ಸೇನ್ ಪ್ರೌಢಶಿಕ್ಷಣ ಮುಗಿಸಿದ ಬಳಿಕ ಕೋಲ್ಕತಾಗೆ ತೆರಳಿ ಭೌತಶಾಸ್ತ್ರ ಅಧ್ಯಯನ ಮಾಡಿದರು. ಸಿನೆಮ ರಂಗದ ಕುರಿತು ಪುಸ್ತಕವೊಂದನ್ನು ಓದಿದ ಸೇನ್ ಸಿನೆಮ ಕ್ಷೇತ್ರದತ್ತ ಆಕರ್ಷಿತರಾದರು. 1955ರಲ್ಲಿ ಉತ್ತಮ್ ಕುಮಾರ್ ಪ್ರಧಾನ ಪಾತ್ರದಲ್ಲಿದ್ದ ರಾತ್ ಭೋರ್ ಎಂಬ ಸಿನೆಮ ನಿರ್ದೇಶಿಸುವುದರೊಂದಿಗೆ ಸಿನೆಮ ರಂಗಕ್ಕೆ ಪಾದಾರ್ಪಣೆ ಮಾಡಿದರು. ‘ನೀಲ್ ಆಕಾಶೆರ್ ನೀಚೆ, ಬೈಷೆ ಶ್ರಾವಣ್, ಭುವನ್ ಶೋಮೆ, ಅಕಾಲೆರ್ ಸಂಧನೆ, ಮೃಗಯಾ ’ ಮುಂತಾದ ಸಿನೆಮಗಳು ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟವು.

ರಾಷ್ಟ್ರೀಯ ಪ್ರಶಸ್ತಿಯಲ್ಲದೆ 1983ರಲ್ಲಿ ಪದ್ಮಭೂಷಣ ಪುರಸ್ಕಾರ ಪಡೆದಿದ್ದರು. ಜೊತೆಗೆ 2005ರಲ್ಲಿ ದೇಶದ ಅತ್ಯುನ್ನತ ಸಿನೆಮ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸೇನ್ ನಿಧನಕ್ಕೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಂಗಾಳಿ ಚಿತ್ರೋದ್ಯಮದ ಹಲವು ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News