ರಾಜ್ಯದ ಕಿರು ಬಂದರುಗಳ ಅಭಿವೃದ್ಧಿಗೆ 52.55 ಕೋಟಿ ರೂ.ಬಿಡುಗಡೆ

Update: 2018-12-30 14:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.30: ರಾಜ್ಯವು 309 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ರಾಜ್ಯದಲ್ಲಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಒಂದು ಬೃಹತ್ ಬಂದರು ಮತ್ತು ರಾಜ್ಯ ಸರಕಾರದ ನಿಯಂತ್ರಣದಲ್ಲಿ 12 ಕಿರು ಬಂದರುಗಳಿವೆ. ಪ್ರಸಕ್ತ ಸಾಲಿಗೆ ಕಿರು ಬಂದರುಗಳ ಅಭಿವೃದ್ಧಿಗಾಗಿ 52.55 ಕೋಟಿ ರೂ.ಅನುದಾನ ಒದಗಿಸಲಾಗಿದೆ.

ಕೇಂದ್ರ ಪುರಸ್ಕೃತ ಕೋಸ್ಟಲ್ ಬರ್ತ್ ಯೋಜನೆಯಡಿಯಲ್ಲಿ 370 ಕೋಟಿ ರೂ.ಮೊತ್ತದ ಪ್ರಸ್ತಾವನೆಗಳಿಗೆ ಮಂಜೂರಾತಿ ದೊರಕಿದ್ದು, ಕೇಂದ್ರ ಸರಕಾರದ ಪಾಲಿನ 117 ಕೋಟಿ ರೂ.ಮೊತ್ತದಲ್ಲಿ 57.87 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರಕಾರದಿಂದ ಒದಗಿಸಲಾಗಿದೆ.

ರಾಜ್ಯದ 12 ಕಿರು ಬಂದರುಗಳಲ್ಲಿ ಕಾರವಾರ ಮತ್ತು ಹಳೆ ಮಂಗಳೂರು ಬಂದರುಗಳಲ್ಲಿ ಮಾತ್ರ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದರಲ್ಲಿ ಹಳೆ ಮಂಗಳೂರು ಬಂದರಿನಿಂದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಆಡಳಿತದ ಅಗತ್ಯಗಳನ್ನು ಪೂರೈಸುವ ಸರಕುಗಳಾದ ಒಣ ಮೀನು, ಸ್ಟೀಲ್, ಸಿಮೆಂಟ್, ಅಕ್ಕಿ, ಗ್ರಾನೈಟ್, ಜೆಲ್ಲಿ, ಎಂ.ಸ್ಯಾಂಡ್, ಕ್ಲೇ ಬ್ರಿಕ್ಸ್, ಟೈಲ್ಸ್, ತರಕಾರಿ, ಹಣ್ಣು-ಹಂಪಲು, ವಾಹನ, ಟಿಂಬರ್, ಶಿಪ್ ಬ್ಲಾಕ್ಸ್ ಮತ್ತು ದವಸ ಧಾನ್ಯಗಳ ಸಾಗಾಣಿಕೆ ನಡೆಯುತ್ತಿದೆ.

ಕಾರವಾರ ಬಂದರಿನಲ್ಲಿ ಮಾತ್ರ ಅಂತರ್‌ರಾಷ್ಟ್ರೀಯ ಹಡಗುಗಳ ಆಗಮನ, ನಿರ್ಗಮನವಿದ್ದು, ಈ ಬಂದರಿನಿಂದ ಪಾಮ್ ಆಯಿಲ್, ಬಿಟುಮಿನ್, ರಾಕ್ ಪಾಸ್ಪೆಟ್, ಕಾಸ್ಟಿಕ್ ಸೋಡಾ ಸೊಲ್ಯೂಶನ್ ಮತ್ತು ಲಿಕ್ವಿಡ್, ಎಚ್‌ಎಸ್‌ಡಿ, ಇಂಡಸ್ಟ್ರೀಯಲ್ ಸಾಲ್ಟ್, ಮೊಲಾಸೆಸ್ ಮತ್ತು ಕೊಪ್ರಾಮಾಸ್ ಸರಕು ಸಾಮಗ್ರಿಗಳ ಆಮದು/ರಫ್ತು ವಹಿವಾಟು ನಡೆಯುತ್ತಿದೆ.

ರಾಜ್ಯದ ಕಿರು ಬಂದರುಗಳಲ್ಲಿ 2015-16ನೆ ಸಾಲಿನಲ್ಲಿ 4,58,098 ಮೆಟ್ರಿಕ್ ಟನ್ ಸರಕು ಆಮದಾಗಿದ್ದರೆ, 3,77,642 ಮೆಟ್ರಿಕ್ ಟನ್ ಸರಕು ರಫ್ತಾಗಿದೆ. 2016-17ನೆ ಸಾಲಿನಲ್ಲಿ 5,16,859 ಮೆಟ್ರಿಕ್ ಟನ್ ಸರಕು ಆಮದು, 1,90,668 ಮೆಟ್ರಿಕ್ ಟನ್ ರಫ್ತು, 2017-18ನೆ ಸಾಲಿನಲ್ಲಿ 6,00,565 ಮೆಟ್ರಿಕ್ ಟನ್ ಸರಕು ಆಮದು, 80,222 ಮೆಟ್ರಿಕ್ ಟನ್ ಸರಕು ರಫ್ತಾಗಿದೆ.

ರಾಜ್ಯದ ಬಂದರುಗಳಲ್ಲಿ ಸುಮಾರು 70 ಸಾವಿರ ಮೀನುಗಾರರು ದುಡಿಯುತ್ತಿದ್ದು, ಇವರ ಪೈಕಿ 2100 ಮಂದಿ ಮಹಿಳೆಯರಿದ್ದಾರೆ. ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮೊಗವೀರರ ಮತ್ತು ಇತರೆ ಕಾರ್ಮಿಕರಿಗಾಗಿ ಸರಕಾರವು ಈ ಕೆಳಕಂಡ ಯೋಜನೆಗಳನ್ನು ಜಾರಿಗೆ ತಂದಿದೆ.

ಉಳಿತಾಯ ಮತ್ತು ಪರಿಹಾರ ಯೋಜನೆಯಡಿಯಲ್ಲಿ ಕರಾವಳಿ ಮೀನುಗಾರರಿಂದ 1500 ರೂ.ಗಳನ್ನು ಮೀನುಗಾರಿಕೆ ಅವಧಿಯಲ್ಲಿ ವಸೂಲಿ ಮಾಡಿ, ಈ ಮೊತ್ತಕ್ಕೆ ಕೇಂದ್ರ ಸರಕಾರ 1500 ರೂ.ಮತ್ತು ರಾಜ್ಯ ಸರಕಾರ 1500 ಸೇರಿಗೆ ಒಟ್ಟು 4500 ರೂ.ಗಳನ್ನು ಮೀನುಗಾರಿಕೆ ಇಲ್ಲದ ಮೂರು ತಿಂಗಳು ಪ್ರತಿ ತಿಂಗಳು 1500 ರೂ.ಗಳಂತೆ ಪ್ರತಿ ಮೀನುಗಾರರಿಗೆ ನೀಡಲು ನಿರ್ಧರಿಸಲಾಗಿದೆ.

ಸಂಕಷ್ಠ ಪರಿಹಾರ ನಿಧಿಯಿಂದ ಮೀನುಗಾರಿಕೆಯಲ್ಲಿ ತೊಡಗಿರುವಾಗ ನೈಸರ್ಗಿಕ ವಿಕೋಪಗಳಿಂದ ಮರಣ ಹೊಂದಿದ ಮೀನುಗಾರರ ಅವಲಂಬಿತರಿಗೆ ಹಾಗೂ ಶಾಶ್ವತ ಅಂಗವಿಕಲರಾದ ಮೀನುಗಾರರಿಗೆ 3 ಲಕ್ಷ ರೂ.ಪರಿಹಾರ ಮತ್ತು ಭಾಗಶಃ ಅಂಗವಿಕಲರಾದವರಿಗೆ 1 ಲಕ್ಷ ರೂ.ಪರಿಹಾರ ನೀಡಲಾಗುವುದು. ಅಲ್ಲದೆ, ಬಲೆಹಾನಿ, ದೋಣಿಹಾನಿ ಮತ್ತು ವೈದ್ಯಕೀಯ ವೆಚ್ಚಗಳಿಗೆ ಗರಿಷ್ಠ 1 ಲಕ್ಷ ರೂ.ಪರಿಹಾರ ನೀಡಲು ಉದ್ದೇಶಿಸಲಾಗಿದೆ.

ಸಾಮೂಹಿಕ ವಿಮಾ ಯೋಜನೆಯಡಿಯಲ್ಲಿ ರಾಜ್ಯದ 2.04 ಲಕ್ಷ ಮೀನುಗಾರರಿಗೆ ಗುಂಪು ವಿಮಾ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯಡಿ ಮೀನುಗಾರಿಕೆಯಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ಮರಣ ಹೊಂದಿದ ಮೀನುಗಾರರ ಅವಲಂಬಿತರಿಗೆ ಹಾಗೂ ಶಾಶ್ವತ ಅಂಗವಿಕಲರಾದ ಮೀನುಗಾರರಿಗೆ 2 ಲಕ್ಷ ರೂ.ಗಳ ಪರಿಹಾರ ಮತ್ತು ಭಾಗಶಃ ಅಂಗವಿಕಲರಾದವರಿಗೆ 1 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತಿದೆ.

ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಮೀನುಗಾರರಿಗೆ ವಾಣಿಜ್ಯ ಬ್ಯಾಂಕುಗಳ ಮುಖಾಂತರ 50 ಸಾವಿರ ರೂ.ಗಳವರೆಗೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಅಲ್ಲದೆ, ವಸತಿ ರಹಿತ ಮೀನುಗಾರರಿಗೆ ಮತ್ಸಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಾಮಾನ್ಯ ಮೀನುಗಾರರಿಗೆ 1.20 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ 1.75 ಲಕ್ಷ ರೂ.ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರೂ.ಸಹಾಯಧನ ನೀಡಲಾಗುತ್ತಿದೆ.

ಸಮುದ್ರ ಕೊರೆತ ತಡೆಗೋಡೆ ನಿರ್ಮಿಸಲು ಪ್ರಸಕ್ತ ಸಾಲಿಗೆ ರಾಜ್ಯ ಸರಕಾರದಿಂದ 9.86 ಕೋಟಿ ರೂ.ಮತ್ತು ನಿರಂತರ ಕರಾವಳಿ ತೀರ ಸಂರಕ್ಷಣೆ ಮತ್ತು ನಿರ್ವಹಣಾ ಯೋಜನೆ(ಎಡಿಬಿ) ಕಾಮಗಾರಿಗಳಿಗೆ 200 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.

Writer - ಅಮ್ಜದ್‌ ಖಾನ್ ಎಂ.

contributor

Editor - ಅಮ್ಜದ್‌ ಖಾನ್ ಎಂ.

contributor

Similar News