ಏರ್‌ಇಂಡಿಯಾ ಹುದ್ದೆಗಳಿಗೆ ವೃತ್ತಿಪರರ ನೇಮಕಕ್ಕೆ ಯೋಜನೆ: ಸುರೇಶ್ ಪ್ರಭು

Update: 2018-12-30 18:06 GMT

ಹೊಸದಿಲ್ಲಿ, ಡಿ.30: ಏರ್‌ಇಂಡಿಯಾ ಸಂಸ್ಥೆಯ ಉನ್ನತ ಹುದ್ದೆಗಳಿಗೆ ವೃತ್ತಿಪರರನ್ನು ನೇಮಿಸುವ ಮೂಲಕ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸರಕಾರ ಯೋಜನೆ ರೂಪಿಸಿದೆ ಎಂದು ನಾಗರಿಕ ವಿಮಾನಯಾನ ಇಲಾಖೆಯ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಏರ್‌ ಇಂಡಿಯಾ ಸಂಸ್ಥೆಯಲ್ಲಿ ಹೊಂದಿರುವ ಶೇರುಗಳನ್ನು ಮಾರಾಟ ಮಾಡಲು ಮೇ ತಿಂಗಳಿನಲ್ಲಿ ಸರಕಾರ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಇದೀಗ ಇತರ ಉಪಕ್ರಮಗಳತ್ತ ಗಮನ ಹರಿಸಿರುವ ಸರಕಾರ, ಸಂಸ್ಥೆಯ ಆಡಳಿತದಲ್ಲಿ ವೃತ್ತಿಪರತೆ ತರುವ ಬಗ್ಗೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ವೃತ್ತಿಪರರ ಹುಡುಕಾಟ ನಡೆಸಲು ಉದ್ದೇಶಿಸಲಾಗಿದೆ. ವಿಶ್ವದ ಅನುಭವಿ ವಿಮಾನಯಾನ ವೃತ್ತಿಪರರನ್ನು ಆಯ್ಕೆ ಮಾಡಲು ಶೋಧ ಸಮಿತಿಯೊಂದನ್ನು ನೇಮಿಸಲಾಗುವುದು. ಈ ಕುರಿತ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಈಗ, ಏರ್‌ಇಂಡಿಯಾದ ಆಡಳಿತ ಸಮಿತಿಯಲ್ಲಿ 9 ಸದಸ್ಯರಿದ್ದು, ಇದರಲ್ಲಿ ಇಬ್ಬರು ನಾಗರಿಕ ವಾಯುಯಾನ ಸಚಿವಾಲಯದ ಅಧಿಕಾರಿಗಳಾಗಿದ್ದಾರೆ. ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿದ್ದು, ಐಟಿಸಿ ಅಧ್ಯಕ್ಷ ವೈಸಿ ದೇವೇಶ್ವರ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಸಹಿತ ಐವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ.

   ಏರ್‌ಇಂಡಿಯಾ ಸಂಸ್ಥೆಯ ಮೇಲೆ 55 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲದ ಹೊರೆ ಇದ್ದು, ಇದರಲ್ಲಿ ಸುಮಾರು 29 ಸಾವಿರ ಕೋಟಿ ರೂ. ಮೊತ್ತದ ಸಾಲವನ್ನು ವಿಶೇಷ ಅಧೀನ ಸಂಸ್ಥೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಅಲ್ಲದೆ ವಿಭಿನ್ನ ವ್ಯವಹಾರ ತಂತ್ರದ ಮೂಲಕ ಹೆಚ್ಚುವರಿ ಆದಾಯ ಗಳಿಸುವುದು ಸೇರಿದಂತೆ ಸಂಸ್ಥೆಯ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News