ಗಾಝಿಪುರ: ಕಲ್ಲೆಸೆತದಲ್ಲಿ ಪೊಲೀಸ್ ಸಾವು ಪ್ರಕರಣ
ಲಕ್ನೊ, ಡಿ.30: ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯಲ್ಲಿ ಪ್ರತಿಭಟನಾನಿರತರ ಕಲ್ಲೆಸೆತದಿಂದ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ 90 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 19 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಯಶ್‌ವೀರ್ ಸಿಂಗ್ ತಿಳಿಸಿದ್ದಾರೆ.
ಬಂಧಿತರಲ್ಲಿ 11 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಘಟನಾ ಸ್ಥಳದ ವೀಡಿಯೊ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ. ದುಷ್ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಗಾಝಿಪುರದಲ್ಲಿ ಶನಿವಾರ ಪ್ರಧಾನಿ ಮೋದಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದ ಭದ್ರತೆಗೆ ನಿಯೋಜಿತರಾಗಿದ್ದ ಹೆಡ್‌ಕಾನ್‌ಸ್ಟೇಬಲ್ ಸುರೇಶ್‌ಪ್ರತಾಪ್ ಸಿಂಗ್ ವತ್ಸ್ ಕಾರ್ಯಕ್ರಮ ಮುಗಿದ ಬಳಿಕ ಹಿಂತಿರುಗುತ್ತಿದ್ದಾಗ , ವಿವಿಧೆಡೆ ರಾಷ್ಟ್ರೀಯ ನಿಶದ್ ಪಕ್ಷದ ಕಾರ್ಯಕರ್ತರು ರಸ್ತೆ ತಡೆಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದ ವತ್ಸ್ ಮೇಲೆ ಗುಂಪೊಂದು ಕಲ್ಲೆಸೆದಿದ್ದು ತಲೆಗೆ ತೀವ್ರ ಏಟು ಬಿದ್ದ ವತ್ಸ್ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಸಾವನ್ನಪ್ಪಿದ್ದರು.
ಉತ್ತರಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ಗುಂಪು ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಎರಡನೇ ಘಟನೆ ಇದಾಗಿದೆ. ಡಿ.3ರಂದು ಬುಲಂದ್‌ಶಹರ್‌ನಲ್ಲಿ ನಡೆದ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು.
ವತ್ಸ್ ಹತ್ಯೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ , ವತ್ಸ್ ಪತ್ನಿಗೆ 40 ಲಕ್ಷ ರೂ. ಮತ್ತು ಪೋಷಕರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.