ಸಜ್ಜನ್ ಕುಮಾರ್ ದಿಲ್ಲಿ ಹೈಕೋರ್ಟ್ ಗೆ ಶರಣು

Update: 2018-12-31 14:12 GMT

ಹೊಸದಿಲ್ಲಿ,ಡಿ.31: ಮಾಜಿ ಕಾಂಗ್ರೆಸ್ ನಾಯಕ ಸಜ್ಜನ ಕುಮಾರ್(73) ಅವರು 1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ತನಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅನುಭವಿಸಲು ಸೋಮವಾರ ಇಲ್ಲಿಯ ಮಹಾನಗರ ನ್ಯಾಯಾಲಯದಲ್ಲಿ ಶರಣಾಗತರಾಗಿದ್ದಾರೆ.

ಕುಮಾರ್ ಅವರನ್ನು ಈಶಾನ್ಯ ದಿಲ್ಲಿಯ ಮಂಡೋಲಿ ಜೈಲಿನಲ್ಲಿರಿಸುವಂತೆ ನ್ಯಾ.ಅದಿತಿ ಗರ್ಗ್ ಅವರು ಆದೇಶಿಸಿದರು.

ತನ್ನನ್ನು ಬಿಗಿಭದ್ರತೆಯ ತಿಹಾರ್ ಜೈಲಿನಲ್ಲಿರಿಸುವಂತೆ ಕೋರಿ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತಾದರೂ ಭದ್ರತೆಗಾಗಿ ಅವರ ಕೋರಿಕೆಯನ್ನು ಪುರಸ್ಕರಿಸಿತು ಮತ್ತು ಅವರನ್ನು ಪ್ರತ್ಯೇಕ ವಾಹನದಲ್ಲಿ ಜೈಲಿಗೆ ಕರೆದೊಯ್ಯುವಂತೆ ಪೊಲೀಸರಿಗೆ ನಿರ್ದೇಶ ನೀಡಿತು. ಸಿಖ್ ವಿರೋಧಿ ದಂಗೆಗಳ ಇನ್ನೊಂದು ಪ್ರಕರಣದಲ್ಲಿಯೂ ಕುಮಾರ್ ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ.

ಉಚ್ಚ ನ್ಯಾಯಾಲಯವು ಕುಮಾರ್ ಶರಣಾಗತಿಗೆ ಡಿ.31ರ ಗಡುವು ವಿಧಿಸಿತ್ತು. ಶರಣಾಗತಿಯ ಗಡುವನ್ನು ಒಂದು ತಿಂಗಳು ವಿಸ್ತರಿಸುವಂತೆ ಅವರ ಕೋರಿಕೆಯನ್ನು ಅದು ಡಿ.21ರಂದು ನಿರಾಕರಿಸಿತ್ತು.

ಉಚ್ಚ ನ್ಯಾಯಾಲಯದಿಂದ ತನ್ನ ದೋಷನಿರ್ಣಯ ಮತ್ತು ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಕುಮಾರ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

ಕುಮಾರ್ ದೋಷಿಯೆಂದು ಡಿ.17ರಂದು ಘೋಷಿಸಿದ್ದ ಉಚ್ಚ ನ್ಯಾಯಾಲಯವು ಜೀವನದ ಉಳಿದ ಭಾಗವನ್ನು ಜೈಲಿನಲ್ಲಿ ಕಳೆಯುವಂತೆ ಆದೇಶಿಸಿತ್ತು. ನ್ಯಾಯಾಲಯದ ತೀರ್ಪಿನ ಬಳಿಕ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ 1984,ನ.1-2ರಂದು ನೈರುತ್ಯ ದಿಲ್ಲಿಯ ಪಾಲಂ ಕಾಲನಿಯಲ್ಲಿ ಐವರು ಸಿಕ್ಖರ ಕೊಲೆ ಮತ್ತು ಗುರುದ್ವಾರಕ್ಕೆ ಬೆಂಕಿ ಹಚ್ಚಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ.

ಪ್ರಕರಣದಲ್ಲಿ 10 ವರ್ಷಗಳ ಜೈಲುಶಿಕ್ಷೆಗೊಳಗಾಗಿರುವ ಮಾಜಿ ಶಾಸಕರಾದ ಕಿಶನ್ ಖೋಖರ್ ಮತ್ತು ಮಹೇಂದ್ರ ಯಾದವ ಅವರೂ ಸೋಮವಾರ ನ್ಯಾಯಾಲಯಕ್ಕೆ ಶರಣಾದರು.

ಮಾಜಿ ಕಾಂಗ್ರೆಸ್ ಕೌನ್ಸಿಲರ್ ಬಲವಾನ್ ಖೋಖರ್,ಮಾಜಿ ನೌಕಾಪಡೆ ಅಧಿಕಾರಿ ಕ್ಯಾ.ಭಾಗ್ಮಲ್ ಮತ್ತು ಗಿರ್ಧಾರಿ ಲಾಲ್ ಅವರು ಶಿಕ್ಷೆಗೊಳಗಾಗಿರುವ ಪ್ರಕರಣದಲ್ಲಿನ ಇತರ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News