×
Ad

ಪಂಪ್ ಚಲಾಯಿಸಲು ವಿದ್ಯುತ್ ಇಲ್ಲ: ಕಂಗಾಲಾಗಿ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ರೈತ!

Update: 2018-12-31 15:08 IST

ಭೋಪಾಲ್, ಡಿ.31: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ರೈತ ಅಜಿತ್ ಜಾಟವ್ ತಮ್ಮ ಗದ್ದೆಗೆ ನೀರು ಹಾಯಿಸಲು ಪಂಪುಗಳನ್ನು ಚಲಾಯಿಸಲೆಂದು ಸಣ್ಣ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗಾಗಿ 6 ತಿಂಗಳ ಹಿಂದೆ 40,000 ರೂ. ಪಾವತಿಸಿದ್ದರು. ಅಂದಿನಿಂದ ವಿದ್ಯುತ್ ಸಂಪರ್ಕಕ್ಕೆ ಅವರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಲೇ ಇದ್ದರೂ ಪ್ರಯೋಜನವಾಗಿರಲಿಲ್ಲ.

ಕಳೆದ ಶುಕ್ರವಾರ ಜಿಲ್ಲಾಧಿಕಾರಿ ಅನುಗ್ರಹ್ ಪಿ ತಮ್ಮ ಕಚೇರಿಯಿಂದ ಹೊರಬರುತ್ತಿರುವುದನ್ನು ಕಂಡ ಜಾಟವ್ ನೇರವಾಗಿ ಆಕೆಯ ಬಳಿ ತೆರಳಿ ಆಕೆಯ ಕಾಲಿಗೆ ಬಿದ್ದಿದ್ದಾರೆ. ಈ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.

ತಾವು ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅವರ ದೂರಾಗಿದೆ. ಜಾಟವ್ ಅವರಂತೆಯೇ ಸುಮಾರು 50 ಮಂದಿಯ ಅರ್ಜಿಗಳು ಬಾಕಿಯಾಗಿವೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.

``ವಿಳಂಬವೇನೂ ಆಗಿಲ್ಲ. ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಟ್ರಾನ್ಸ್‍ಫಾರ್ಮರ್ ಅಳವಡಿಸಲು ಆರು ತಿಂಗಳು ಬೇಕಾಗುತ್ತದೆ. ವೇಟಿಂಗ್ ಲಿಸ್ಟಿನಲ್ಲಿ ಹಲವರು ಇದ್ದಾರೆ. ಅವರು ಆಗಸ್ಟ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಅವರಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ,'' ಎಂದು ಅವರು ತಿಳಿಸಿದ್ದಾರೆ.

ಟ್ರಾನ್ಸ್‍ಫಾರ್ಮರ್‍ಗೆ ಬಹಳಷ್ಟು ಬೇಡಿಕೆಯಿರುವುದರಿಂದ ರೈತರು ಅದಕ್ಕಾಗಿ ಮುಂಚಿತವಾಗಿಯೇ ಹಣ ಪಾವತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News