ಸೊಹ್ರಾಬುದ್ದೀನ್ ಪ್ರಕರಣದ ತನಿಖೆಯನ್ನು ಕೊಂದದ್ದು ಯಾರು: ರಾಹುಲ್ ಗೆ ಜೇಟ್ಲಿ ತಿರುಗೇಟು

Update: 2018-12-31 10:10 GMT

ಹೊಸದಿಲ್ಲಿ, ಡಿ.31: ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ 22 ಮಂದಿಯನ್ನು ದೋಷಮುಕ್ತಗೊಳಿಸಿ ಇತ್ತೀಚೆಗೆ ಕೋರ್ಟ್ ತೀರ್ಪು ನೀಡಿರುವ ಕುರಿತಂತೆ “ಯಾರೂ ಕೊಂದಿಲ್ಲ, ಅವರು ಕೇವಲ ಸತ್ತರು” ಎಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೂ ಕಿಲ್ಡ್ ದಿ ಸೊಹ್ರಾಬುದ್ದೀನ್ ಇನ್ವೆಸ್ಟಿಗೇಶನ್? (ಸೊಹ್ರಾಬುದ್ದೀನ್ ತನಿಖೆಯನ್ನು ಯಾರು ಕೊಂದಿದ್ದು?)” ಎಂಬ ಶೀರ್ಷಿಕೆಯ ಫೇಸ್‍ ಬುಕ್ ಪೋಸ್ಟ್ ನಲ್ಲಿ ಜೇಟ್ಲಿ ರಾಹುಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ದೋಷಮುಕ್ತಗೊಳಿಸಿ ನೀಡಿದ ಆದೇಶಕ್ಕಿಂತ ಹೆಚ್ಚಾಗಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತನಿಖಾ ಏಜನ್ಸಿ ಆರಂಭದಿಂದಲೂ ಈ ಪ್ರಕರಣದಲ್ಲಿ ಸತ್ಯವನ್ನು ಕಂಡು ಹಿಡಿಯಲು ವೃತ್ತಿಪರವಾಗಿ ತನಿಖೆ ನಡೆಸಿಲ್ಲ. ಬದಲಾಗಿ ಈ ಪ್ರಕರಣವನ್ನು ಕೆಲವೊಂದು ರಾಜಕೀಯ ವ್ಯಕ್ತಿಗಳತ್ತ ಗಮನ ಕೇಂದ್ರೀಕರಿಸಲು ಉಪಯೋಗಿಸಿದೆ ಎಂಬುದಾಗಿ ಹೇಳಿರುವುದು ಹೆಚ್ಚು ಪ್ರಸ್ತುತ,'' ಎಂದು ಜೇಟ್ಲಿ ಹೇಳಿದ್ದಾರೆ.

“ಸಾಂಸ್ಥಿಕ ಸ್ವಾತಂತ್ರ್ಯದ ಬಗ್ಗೆ ಇತ್ತೀಚೆಗೆ ಹೆಚ್ಚು ಕಾಳಜಿ ತೋರಿಸುತ್ತಿರುವವರು ತಾವು ಅಧಿಕಾರದಲ್ಲಿದ್ದಾಗ ಸಿಬಿಐಗೆ ಏನು ಮಾಡಿದ್ದರೆಂಬುದರ ಬಗ್ಗೆ ಗಂಭೀರವಾಗಿ ಅವಲೋಕಿಸಬೇಕು'' ಎಂದು ಅವರು ಬರೆದಿದ್ದಾರೆ.

ತಾವು ಸೆಪ್ಟೆಂಬರ್ 2015ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿದ್ದ 15 ಪುಟಗಳ ಪತ್ರವನ್ನು ನೆನಪಿಸಿಕೊಂಡ ಅವರು, ಸೊಹ್ರಾಬುದ್ದೀನ್, ತುಳಸಿ ಪ್ರಜಾಪತಿ, ಇಶ್ರತ್ ಜಹಾನ್, ರಾಜಿಂದರ್ ರಾಥೋರ್ ಹಾಗೂ ಹರೇನ್ ಪಾಂಡ್ಯ ಪ್ರಕರಣಗಳ ತನಿಖೆಯ ರಾಜಕೀಕರಣದ ಬಗ್ಗೆ  ಪತ್ರದಲ್ಲಿ ತಾವು ಬೆಳಕು ಚೆಲ್ಲಿದ್ದಾಗಿ ಹೇಳಿದರು.

“ಆ ಪತ್ರದಲ್ಲಿ ನಾನು ಬರೆದಿದ್ದ ಪ್ರತಿಯೊಂದು ಶಬ್ಧವೂ ಮುಂದಿನ ಐದು ವರ್ಷಗಳಲ್ಲಿ ನಿಜವೆಂದು ಸಾಬೀತಾಗಿದೆ. ನಮ್ಮ ತನಿಖಾ ಏಜನ್ಸಿಗೆ ಕಾಂಗ್ರೆಸ್ ಏನು ಮಾಡಿತ್ತೆಂಬುದಕ್ಕೆ ಇದು ಅಲ್ಲಗಳೆಯಲಾಗದ ಸಾಕ್ಷಿ'' ಎಂದು ಜೇಟ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News