‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’: ಅನುಪಮ್ ಖೇರ್ ವಿರುದ್ಧ ಕಿಡಿಕಾರಿದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

Update: 2018-12-31 15:11 GMT

ಮುಂಬೈ, ಡಿ.31: ಬಹುಚರ್ಚಿತ ಚಿತ್ರ "ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್"ನ ಟ್ರೇಲರ್ ಕಳೆದ ವಾರ ಬಿಡುಗಡೆಯಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆಯನ್ನು ಒಳಗೊಂಡಂತಿರುವ ಚಿತ್ರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಘಟನಾವಳಿಗಳನ್ನಾಧರಿಸಿದೆ. ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರ ಕೃತಿಯನ್ನಾಧರಿಸಿದ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ಬಾರು ಪಾತ್ರ ನಿರ್ವಹಿಸಿದ್ದಾರೆ.

ಬಿಜೆಪಿಯ ಬೆಂಬಲಿಗ, ಮೋದಿಯವರ ಕಟ್ಟಾ ಅಭಿಮಾನಿ ಅನುಪಮ್ ಖೇರ್ ಈ ಚಿತ್ರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, "ಇದು ಜೀವನದ ಅತ್ಯುತ್ತಮ ಪ್ರದರ್ಶನ ಹಾಗೂ ಐತಿಹಾಸಿಕವಾಗಿ ನಿಖರ" ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಟ್ವೀಟ್ ಮಾಡಿ, "ದೀಪಿಕಾ ಪಡುಕೋಣೆಯವರಿಗೆ ಪದ್ಮಾವತಿ ಪಾತ್ರ ನಿರ್ವಹಿಸಿದ್ದಕ್ಕಾಗಿ ಅಂದಿನ ಸಚಿವರು ಬೆದರಿಕೆ ಹಾಕಿದ್ದಾಗ.. ಅನುಪಮ್ ಖೇರ್ ಅವರು ಇದನ್ನು ಖಂಡಿಸಿದ್ದಾರೆಯೇ ಎಂದು ನಾನು ತಿಳಿಯಬಯಸುತ್ತೇನೆ!, ಇದಕ್ಕಾಗಿ ನಾನು ಹುಡುಕಾಡಿದೆ... ಏನೂ ಸಿಕ್ಕಿಲ್ಲ...ಸತ್ಯಾಂಶ ತಿಳಿಯಲು ದಯವಿಟ್ಟು ನೆರವಾಗಿ!" ಎಂದು ವ್ಯಂಗ್ಯವಾಡಿದ್ದಾರೆ.

2018ರ ಜನವರಿಯಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದ ಬಗ್ಗೆ ಸಂಘಪರಿವಾರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಇತಿಹಾಸ ತಿರುಚಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದರು. ನಾಯಕಿ ಪಾತ್ರ ನಿರ್ವಹಿಸಿದ ದೀಪಿಕಾ ಅವರ ತಲೆ ಕತ್ತರಿಸಿದರೆ 10 ಕೋಟಿ ನೀಡುವುದಾಗಿ ಘೋಷಿಸಿದ್ದರು.

ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶನದ, ಮಯಾಂಕ್ ತಿವಾರಿ ಚಿತ್ರಕಥೆ ರಚಿಸಿದ "ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್" ಚಿತ್ರ ಜನವರಿ 11ರಂದು ತೆರೆ ಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News