ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಫೈನಲ್‌ಗೆ

Update: 2018-12-31 19:04 GMT

ಕೊಚ್ಚಿ, ಡಿ.31: ಪ್ರೊ ಕಬಡ್ಡಿ 6ನೇ ಋತುವಿನ ಪ್ರಥಮ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಗುಜರಾತ್ ಫಾರ್ಚುನ್‌ಜೈಂಟ್ಸ್‌ನ್ನು 41-29 ಅಂಕಗಳ ಅಂತರದಿಂದ ಮಣಿಸಿದ ಬೆಂಗಳೂರು ಬುಲ್ಸ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ಇಲ್ಲಿಯ ರಾಜೀವ್‌ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮದಗಜಗಳ ಕಾದಾಟದಂತಿತ್ತು. ಬೆಂಗಳೂರು ತಂಡದ ಪರ ಬಹುತೇಕ ಪಂದ್ಯಗಳಲ್ಲಿ ಮಿಂಚಿರುವ ಪವನ್‌ಕುಮಾರ್ ಈ ಪಂದ್ಯದಲ್ಲೂ ತಮ್ಮ ಅದ್ಭುತ ಕರಾಮತ್ತು ಪ್ರದರ್ಶಿಸಿದರು. ಪವನ್ ಒಟ್ಟು 13 ಅಂಕಗಳನ್ನು ಗಳಿಸಿದರೆ, ರೋಹಿತ್‌ಕುಮಾರ್ 11 ಹಾಗೂ ಮಹೇಂದರ್ ಸಿಂಗ್ 6 ಅಂಕ ಗಳಿಸಿದರು. ಪರಾಜಿತ ಫಾರ್ಚುನ್‌ಜೈಂಟ್ಸ್ ಪರ ಸಚಿನ್ 10, ಪ್ರಪಂಜನ್ ಹಾಗೂ ಹಾಡಿ ಓಶ್ತೋರಾಕ್ 5 ಅಂಕಗಳನ್ನು ಗಳಿಸಿದರು. ಯೋಧಾಗೆ ಜಯ : ದಿನದ ಮತ್ತೊಂದು ಪಂದ್ಯವಾದ ಮೂರನೇ ಎಲಿಮಿನೇಟರ್‌ನಲ್ಲಿ ಯುಪಿ ಯೋಧಾ ತಂಡ ದಬಾಂಗ್ ದಿಲ್ಲಿಯನ್ನು 45-33 ಅಂಕಗಳ ಅಂತರದಿಂದ ಮಣಿಸಿತು. ಯೋಧಾ ಪರ ಕನ್ನಡಿಗ ಪ್ರಶಾಂತ್‌ಕುಮಾರ್ ರೈ ಅತ್ಯಧಿಕ 13 ಅಂಕ ಗಳಿಸಿದರು.ಇದರೊಂದಿಗೆ ಯುಪಿ ಯೋಧಾ ತಂಡ ಜ.3ರಂದು ನಡೆಯುವ 2ನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಫಾರ್ಚುನ್‌ಜೈಂಟ್ಸ್‌ನ್ನು ಎದುರಿಸಲಿದೆ. ದಬಾಂಗ್ ದಿಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News