ಸರ್ಕಾರಿ ಕ್ಯಾಲೆಂಡರ್‌ನಲ್ಲೂ ಎನ್‌ಡಿಎ ಸರ್ಕಾರದ ಯೋಜನೆಗಳ ಪ್ರಚಾರ!

Update: 2019-01-02 04:31 GMT

ಹೊಸದಿಲ್ಲಿ, ಜ.2: ಈ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಶತಾಯ ಗತಾಯ ಪ್ರಯತ್ನದಲ್ಲಿರುವ ಮೋದಿ ಸರ್ಕಾರ ತಮ್ಮ ಸರ್ಕಾರದ ಯೋಜನೆಗಳ ಪ್ರಚಾರದ ಸಣ್ಣ ಅವಕಾಶವನ್ನೂ ತಪ್ಪಿಸಿಕೊಂಡಿಲ್ಲ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರತಂದ 2019ರ ಕ್ಯಾಲೆಂಡರ್ ಕೂಡಾ ಇದಕ್ಕೆ ಹೊರತಾಗಿಲ್ಲ!

 ಸರ್ಕಾರಿ ಕ್ಯಾಲೆಂಡರ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ, ಸಾಧನೆಗಳ ಬಗ್ಗೆ ವಿವರಗಳನ್ನು ಪ್ರಕಟಿಸಲಾಗಿದೆ. ಉದಾಹರಣೆಗೆ ಜನವರಿ ತಿಂಗಳಲ್ಲಿ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ವರ್ಷಾಚರಣೆಯನ್ನು ನಮೂದಿಸಲಾಗಿದೆ. 2016ರ ಜನವರಿ 13ರಂದು ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಇದೇ ತಿಂಗಳಲ್ಲಿ ಬೇಟಿ ಬಚಾವೊ, ಬೇಟಿ ಪಢಾವೊ ಯೋಜನೆಯ ಉಲ್ಲೇಖವೂ ಇದ್ದು, ಲಿಂಗಾನುಪಾತ ಹೆಚ್ಚಿಸುವ ಉದ್ದೇಶದ ಈ ಯೋಜನೆಗೆ 2015ರ ಜನವರಿ 22ರಂದು ಪ್ರಧಾನಿ ಈ ಯೋಜನೆಗೆ ಚಾಲನೆ ನೀಡಿದರು. ಹೆಣ್ಣುಮಕ್ಕಳ ಹೆಸರಿನಲ್ಲಿ ಠೇವಣಿ ಇಡುವ ಸುಕನ್ಯ ಸಮೃದ್ಧಿ ಯೋಜನೆಗೂ ಮೋದಿ ಅಂದು ಚಾಲನೆ ನೀಡಿದ್ದರು. ಕ್ಯಾಲೆಂಡರ್‌ನಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಅದರಿಂದ ಜನರಿಗೆ ಆಗಿರುವ ಪ್ರಯೋಜನಗಳ ಹೈಲೈಟ್ಸ್ ಇದೆ.

 ಡಿಸೆಂಬರ್ 25ನ್ನು ಕ್ಯಾಲೆಂಡರ್ ಮಿಷನ್ ಇಂದ್ರಧನುಷ್ ಯೋಜನೆಯ ದಿನ ಎಂದು ನಮೂದಿಸಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರೈತರ ಆಕ್ರೋಶದಿಂದಾದ ಸೋಲು ಎನ್‌ಡಿಎ ಸರ್ಕಾರಕ್ಕೆ ಆಘಾತ ತಂದಿದ್ದು, ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.

ಆದರೆ ಚುನಾವಣಾ ವರ್ಷ ಕ್ಯಾಲೆಂಡರನ್ನು ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಹಿಂದಿನ ಯುಪಿಎ ಸರ್ಕಾರ ಕೂಡಾ ಇಂಥದ್ದೇ ಪ್ರಚಾರ ತಂತ್ರ ಅನುಸರಿಸಿ ದೇಶದ 12 ಲಕ್ಷ ಪಂಚಾಯ್ತಿಗಳಿಗೆ ಕ್ಯಾಲೆಂಡರ್ ತಲುಪಿಸಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News