×
Ad

ಆಕಸ್ಮಿಕವಾಗಿ ಹಸುವನ್ನು ಕೊಂದ ರೈತನ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ

Update: 2019-01-02 20:33 IST
ಸಾಂದರ್ಭಿಕ ಚಿತ್ರ

ಭೋಪಾಲ,ಜ.2: ದನದ ಸಾವಿಗೆ ಆಕಸ್ಮಿಕವಾಗಿ ಕಾರಣರಾದ ರೈತ ಮತ್ತು ಅವರ ಕುಟುಂಬಕ್ಕೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿದ ಘಟನೆ ಮಧ್ಯ ಪ್ರದೇಶದ ಶಿಯೊಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈತ ಪಪ್ಪು ಪ್ರಜಾಪತಿ (36) ಹಾಗೂ ಅವರ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮ ಪಂಚಾಯತ್‌ನಲ್ಲಿ ತೆಗೆದುಕೊಳ್ಳಲಾಗಿದೆ.

ರೈತನ ಇಡೀ ಕುಟುಂಬ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕನ್ಯಾ ಮತ್ತು ಬ್ರಾಹ್ಮಣ ಭೋಜನ ಕೂಟವನ್ನು ಆಯೋಜಿಸಿ ಗೋದಾನ ಮಾಡಿದ ನಂತರವೇ ಗ್ರಾಮವನ್ನು ಪ್ರವೇಶಿಸಬೇಕು ಎಂದು ಗ್ರಾಮ ಪಂಚಾಯತ್ ಮುಖ್ಯಸ್ಥ ಪಂಚಮ್ ಸಿಂಗ್ ಚೌಹಾಣ್ ನೇತೃತ್ವದ ತಂಡ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾಪತಿ ತಿಳಿಸಿರುವಂತೆ, ಅವರು ತನ್ನ ಟ್ರಾಕ್ಟರ್ ಟ್ರಾಲಿಯನ್ನು ನಿಲ್ಲಿಸಲು ಹಿಂದಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಅಲ್ಲೇ ಕುಳಿತಿದ್ದ ದನಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ದನ ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನು ಗೋಹತ್ಯೆ ಎಂದು ಆರೋಪಿಸಿದ ಗ್ರಾಮಸ್ಥರು ಪಂಚಾಯತಿಗೆ ಕರೆ ನೀಡಿದ್ದರು.

ಈ ಕುರಿತು ಮಾತನಾಡಿದ ಶಿಯೊಪುರ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ರಾಜೇಂದ್ರ ರೈ, ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಬಗ್ಗೆ ನಾವು ಗಮನಹರಿಸಿ ಸೂಕ್ರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News