×
Ad

ಆರ್‌ಜೆಡಿ ನಾಯಕನ ಹತ್ಯೆ: ಪ್ರತೀಕಾರಕ್ಕೆ ಬಾಲಕ ಸಹಿತ ಇಬ್ಬರು ಬಲಿ

Update: 2019-01-02 20:40 IST

ನಲಂದಾ,ಜ.2: ಸ್ಥಳೀಯ ಆರ್‌ಜೆಡಿ ನಾಯಕನ ಸಾವಿನಿಂದ ಆಕ್ರೋಶಿತಗೊಂಡ ತಂಡ ನಡೆಸಿದ ಹಿಂಸಾಚಾರದಲ್ಲಿ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಬಲಿಯಾದ ಘಟನೆ ಬುಧವಾರ ಬಿಹಾರದ ನಲಂದಾ ಜಿಲ್ಲೆಯಿಂದ ವರದಿಯಾಗಿದೆ.

ರಾಷ್ಟ್ರೀಯ ಜನತಾದಳದ ಎಸ್ಸಿ/ಎಸ್ಟಿ ವಿಭಾಗದ ಪದಾಧಿಕಾರಿ ಇಂದಲ್ ಪಾಸ್ವಾನ್ ಮಂಗಳವಾರ ರಾತ್ರಿ ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಜಿಲ್ಲೆಯ ಮಗಂದ ಸರೈ ಗ್ರಾಮದಲ್ಲಿರುವ ತನ್ನ ನಿವಾಸಕ್ಕೆ ಮರಳುತ್ತಿದ್ದ ವೇಳೆ ಅವರ ಮೇಲೆ ದಾಳಿ ಮಾಡಿದ ಗುಂಪು ಗುಂಡಿನ ಮಳೆಗರೆದು ಪರಾರಿಯಾಗಿತ್ತು. ಪಾಸ್ವಾನ್ ಮನೆಗೆ ವಾಪಸಾಗದ ಕಾರಣ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಹುಡುಕಾಟ ನಡೆಸಿದಾಗ ಅವರ ಮೃತದೇಹ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾಸ್ಥಳದಲ್ಲಿ ಜಮಾಯಿಸಿದ ಪಾಸ್ವಾನ್ ಬೆಂಬಲಿಗರು ಈ ಕೊಲೆಯನ್ನು ಸ್ಥಳೀಯ ನಿವಾಸಿ ಚುನ್ನಿ ಲಾಲ್ ಎಂಬಾತನೇ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಚುನ್ನಿ ಲಾಲ್ ಮನೆಯ ಮೇಲೆ ದಾಳಿ ಮಾಡಿದ ಆಕ್ರೋಶಿತರ ಗುಂಪು ಮನೆಯಲ್ಲಿದ್ದ ಚುನ್ನಿ ಲಾಲ್, ಆತನ ಸಹಚರರಾದ ಅಪ್ರಾಪ್ತ ಬಾಲಕರಾದ ರಂಜಯ್ ಯಾದವ್ ಮತ್ತು ಸಂತು ಮಲಕರ್ ಮೇಲೆ ಹಲ್ಲೆ ನಡೆಸಿತ್ತು ಮತ್ತು ಚುನ್ನಿ ಲಾಲ್ ಮನೆಗೆ ಬೆಂಕಿ ಹಚ್ಚಿತ್ತು.

ಘಟನೆಯಲ್ಲಿ ತೀವ್ರ ಗಾಯಗೊಂಡ ಚುನ್ನಿ ಲಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ ಮಲಕರ್ ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಪವಿಭಾಗ ಪೊಲೀಸ್ ಅಧಿಕಾರಿ ಇಮ್ರಾನ್ ಫರ್ವೇಝ್ ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸ್ಥಳಕ್ಕಾಗಮಿಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News