ಆಧಾರ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2019-01-02 15:18 GMT

ಹೊಸದಿಲ್ಲಿ, ಜ.2: ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ವಿರೋಧದ ಮಧ್ಯೆಯೇ ಸರಕಾರ 2016ರ ಆಧಾರ್ ಕಾಯ್ದೆಗೆ ತಿದ್ದುಪಡಿ ಬಯಸುವ ಆಧಾರ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.

ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ ಪ್ರಸ್ತಾವಿತ ತಿದ್ದುಪಡಿಗೆ ಸರಕಾರ ಮುಂದಾಗಿದೆ ಮತ್ತು ಆಧಾರ್ ಕಾರ್ಡ್‌ನಿಂದ ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯಾಗದು ಎಂದು ಮಸೂದೆ ಮಂಡಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಮೊಬೈಲ್ ನಂಬರ್ ಪಡೆಯಲು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್‌ನ ತೀರ್ಪನ್ನು ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಉಲ್ಲಂಘಿಸಲಾಗಿಲ್ಲ ಎಂದು ಸಚಿವರು ಭರವಸೆ ನೀಡಿದರು.

ಆಧಾರ್ ಕಾರ್ಡ್‌ನಿಂದ ನೇರ ನೆರವು ವರ್ಗಾವಣೆ (ಡಿಬಿಟಿ) ಸಾಧ್ಯವಾಗಿದ್ದು ಈ ಮೂಲಕ 90 ಸಾವಿರ ಕೋಟಿ ರೂ. ಉಳಿಸಲಾಗಿರುವುದನ್ನು ಮರೆಯಬಾರದು. ಅಲ್ಲದೆ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನಂತಹ ಪ್ರತಿಷ್ಟಿತ ಅಂತಾರಾಷ್ಟ್ರೀಯ ಸಂಸ್ಥೆಗಳೂ ಆಧಾರ್ ಕಾರ್ಡ್ ಭಾರತದ ಅನನ್ಯ ಕಲ್ಪನೆಯಾಗಿದೆ ಎಂದು ಶ್ಲಾಘಿಸಿವೆ ಎಂದು ಸಚಿವ ಪ್ರಸಾದ್ ಹೇಳಿದರು. ಕಾಂಗ್ರೆಸ್ ಸದಸ್ಯ ಶಶಿ ಥರೂರ್, ಟಿಎಂಸಿಯ ಸುಗತಾ ರಾಯ್ ಮತ್ತು ಆರೆಸ್ಪಿ(ರೆವೊಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ)ಯ ಎನ್‌ಕೆ ಪ್ರೇಮಚಂದ್ರನ್ ಮಸೂದೆ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದರು.

 ಆಧಾರ್ ತಿದ್ದುಪಡಿ ಮಸೂದೆಗೂ ಮೊದಲು ದತ್ತಾಂಶ(ಮಾಹಿತಿ) ರಕ್ಷಣೆ ಕಾನೂನನ್ನು ಜಾರಿಗೆ ತರಬೇಕು ಎಂದು ಥರೂರ್ ಒತ್ತಾಯಿಸಿದರು. ಆಧಾರ್ ತಿದ್ದುಪಡಿ ಮಸೂದೆ, ಇಂಡಿಯನ್ ಟೆಲಿಗ್ರಾಫ್ ಕಾಯ್ದೆ 1885 ತಿದ್ದುಪಡಿ ಮಸೂದೆ ಹಾಗೂ ಹಣ ಅಕ್ರಮ ಸಾಗಣೆ ತಡೆ ಕಾಯ್ದೆ 2002 ತಿದ್ದುಪಡಿ ಮಸೂದೆಯನ್ನು ಬುಧವಾರ ಲೋಕಭೆಯಲ್ಲಿ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಸರಕಾರ ಮಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News