ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ವಿಲೀನಕ್ಕೆ ಸಂಪುಟ ಒಪ್ಪಿಗೆ

Update: 2019-01-02 15:43 GMT

ಹೊಸದಿಲ್ಲಿ, ಜ.2: ಬ್ಯಾಂಕ್ ಆಫ್ ಬರೋಡಾ(ಬಿಒಬಿ)ದೊಂದಿಗೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಬಳಿಕದ ಮೂರನೇ ಬೃಹತ್ ಬ್ಯಾಂಕ್ ಆಗಿ ಬ್ಯಾಂಕ್ ಆಫ್ ಬರೋಡಾ ಮಾನ್ಯತೆ ಪಡೆಯಲಿದೆ.

 ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾಕ್ಕೆ ಹೆಚ್ಚಿನ ಸಾಲ ನೀಡುವ ಅಧಿಕಾರ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವ ಅನನ್ಯತೆ ಪ್ರಾಪ್ತಿಯಾಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆಯಿಂದ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್‌ನ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಹಾಗೂ ಕೆಲಸದ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮವಾಗದು. ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗದು. ಈ ಸಿಬ್ಬಂದಿಗಳು ಬ್ಯಾಂಕ್ ಆಫ್ ಬರೋಡಾದಡಿ ಬರಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಮೂರು ಬ್ಯಾಂಕ್‌ಗಳ ವಿಲೀನದ ಕುರಿತು ಕಳೆದ ಸೆಪ್ಟೆಂಬರ್‌ನಲ್ಲಿ ಸರಕಾರ ಘೋಷಿಸಿತ್ತು. ಮೂರು ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆದಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ಐದು ಅಧೀನ ಬ್ಯಾಂಕ್‌ಗಳು ವಿಲೀನಗೊಂಡಿದ್ದವು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸ್ಟೇಟ್‌ಬ್ಯಾಂಕ್ ವಶಕ್ಕೆ ಪಡೆದುಕೊಳ್ಳುವ ಮೂಲಕ ವಿಶ್ವದ 50 ಪ್ರಮುಖ ಬ್ಯಾಂಕ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿತ್ತು. ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾ(ಬಿಒಬಿ) ಶೇರುಗಳ ಸಂಯೋಜನೆ ವ್ಯವಸ್ಥೆಯನ್ನು ಅಂತಿಮಗೊಳಿಸಿದ್ದು , ವಿಜಯಾ ಬ್ಯಾಂಕ್‌ನ 1 ಸಾವಿರ ಶೇರುಗಳನ್ನು ಹೊಂದಿದವರು ಬಿಒಬಿಯ 402 ಇಕ್ವಿಟಿ ಶೇರುಗಳನ್ನು, ದೇನಾ ಬ್ಯಾಂಕ್‌ನ 1 ಸಾವಿರ ಶೇರುಗಳನ್ನು ಹೊಂದಿದ್ದವರು ಬಿಒಬಿಯ 110 ಶೇರುಗಳನ್ನು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News