ಶಬರಿಮಲೆ ವಿವಾದ: ಬಿಜೆಪಿಯ ಹರತಾಳಕ್ಕೆ ವ್ಯಾಪಾರಿಗಳ, ಪ್ರವಾಸೋದ್ಯಮ ಸಂಸ್ಥೆಗಳ ವಿರೋಧ

Update: 2019-01-02 16:17 GMT

ತಿರುವನಂತಪುರ, ಜ.2: ಶಬರಿಮಲೆ ದೇವಸ್ಥಾನಕ್ಕೆ 50 ವರ್ಷದ ಕೆಳಗಿನ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲಿತ ಸಂಘಟನೆ ಕರೆ ನೀಡಿರುವ ಗುರುವಾರದ ಕೇರಳ ಬಂದ್ ಪ್ರತಿಭಟನೆಗೆ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ಗುರುವಾರ ಪ್ರವಾಸೋದ್ಯಮ ಕ್ಷೇತ್ರದ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುವಂತೆ ಕೇರಳ ಪ್ರವಾಸೋದ್ಯಮ ಕಾರ್ಯಪಡೆ ಸಂಚಾಲಕ ಅಬ್ರಹಾಂ ಜಾರ್ಜ್, ಕೇರಳ ಟ್ರಾವೆಲ್ ಮಾರ್ಟ್ ಸೊಸೈಟಿ ಅಧ್ಯಕ್ಷ ಬೇಬಿ ಮ್ಯಾಥ್ಯೂ, ಕೇರಳ ಪ್ರವಾಸೋದ್ಯಮ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಇಎಂ ನಜೀಬ್ ಅವರು ರಾಜ್ಯ ಸರಕಾರ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಇತರ ಸಂಘಟನೆಗಳನ್ನು ಕೋರಿದ್ದಾರೆ.

ನವೆಂಬರ್-ಡಿಸೆಂಬರ್ ತಿಂಗಳು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ತಿಂಗಳಾಗಿದೆ. ನೆರೆಹಾವಳಿಯಿಂದ ಈಗಾಗಲೇ ಸಾಕಷ್ಟು ನಷ್ಟ ಸಂಭವಿಸಿದ್ದು ಇನ್ನೊಂದು ಬಂದ್ ನಡೆಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಅಲ್ಲದೆ ಎಡಪಕ್ಷ ಬೆಂಬಲಿತ ವ್ಯಾಪಾರಿ ಸಂಘಟನೆ ಕೇರಳ ವ್ಯಾಪಾರಿ ವ್ಯವಸಾಯಿ ಸಮಿತಿ ಮತ್ತು ಕೇರಳ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿ(ಕೆವಿವಿಇಎಸ್) ಕೂಡಾ ಬಂದ್‌ಗೆ ವಿರೋಧ ಸೂಚಿಸಿದೆ.

ಶಬರಿಮಲೆ ಚಳವಳಿಯಿಂದ ರಾಜ್ಯದ ವ್ಯಾಪಾರಿಗಳಿಗೆ ಆಗಬೇಕಾದ್ದೇನಿಲ್ಲ. ಅಲ್ಲದೆ ಆಗಿಂದಾಗ್ಗೆ ಬಂದ್ ಆಚರಿಸುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಕೆವಿವಿಇಎಸ್ ಅಧ್ಯಕ್ಷ ಟಿ. ನಾಸಿರುದ್ದೀನ್ ಕೋಝಿಕೋಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News