ಗಣಿದುರಂತ: ಮೇಘಾಲಯ ಸರಕಾರದ ಕ್ರಮಗಳ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

Update: 2019-01-03 16:37 GMT

ಹೊಸದಿಲ್ಲಿ,ಜ.3: ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್‌ನಲ್ಲಿಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಡಿ.13ರಿಂದ ಸಿಕ್ಕಿ ಹಾಕಿಕೊಂಡಿರುವ 15 ಗಣಿ ಕಾರ್ಮಿಕರ ರಕ್ಷಣೆಗಾಗಿ ಮೇಘಾಲಯ ಸರಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗುರುವಾರ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಇದು ಸಾವು-ಬದುಕಿನ ಪ್ರಶ್ನೆಯಾಗಿರುವುದರಿಂದ ಅವರ ರಕ್ಷಣೆಗಾಗಿ ಪ್ರಾಮಾಣಿಕ,ತಕ್ಷಣದ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯ ಅಗತ್ಯವಿದೆ ಎಂದು ಹೇಳಿತು.

ಕಾರ್ಮಿಕರು ಗಣಿಯಲ್ಲಿ ಸಿಕ್ಕಿಕೊಂಡು ಮೂರು ವಾರಗಳಾಗುತ್ತಿವೆ. ಅವರ ಪಾಲಿಗೆ ಪ್ರತಿ ನಿಮಿಷವೂ ಅಮೂಲ್ಯವಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು,ಸರಕಾರವು ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ಶುಕ್ರವಾರದೊಳಗೆ ತನಗೆ ಮಾಹಿತಿಯನ್ನು ನೀಡುವಂತೆ ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಸೂಚಿಸಿತು.

ಒಕ್ಕೂಟ ಸರಕಾರವಾಗಿ ನೀವು ಈಗ ಏನಾದರೂ ಮಾಡಬೇಕು. ನೀವಿನ್ನೂ ಸೇನೆಯ ನೆರವು ಪಡೆದಿಲ್ಲ,ಮೊದಲು ಆ ಕೆಲಸವನ್ನು ಮಾಡಿ. ಸೇನೆಯು ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿದೆ ಎಂದು ಮೆಹ್ತಾ ಅವರಿಗೆ ಪೀಠವು ತಿಳಿಸಿತು.

ಸಂಪೂರ್ಣವಾಗಿ ಮರಗಳಿಂದ ಆವೃತವಾಗಿರುವ ಗುಡ್ಡದ ತುದಿಯಲ್ಲಿನ ಕಿರಿದಾದ ಸುರಂಗದ ರೂಪದಲ್ಲಿ ತೋಡಲಾದ ಕಲ್ಲಿದ್ದಲು ಗಣಿಯಲ್ಲಿ ಸಮೀಪದ ಲಿಟಿನ್ ನದಿಯ ನೀರು ನುಗ್ಗಿದ ಪರಿಣಾಮ 15 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ.

ಎನ್‌ಡಿಆರ್‌ಎಫ್‌ನ ಹಲವಾರು ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಸರಕಾರವು ಸೇನೆಯ ಬದಲು ನೌಕಾಪಡೆಯ ಸಿಬ್ಬಂದಿಗಳನ್ನು ಅಲ್ಲಿಗೆ ರವಾನಿಸಿದೆ ಎಂದು ಮೆಹ್ತಾ ವಿವರಿಸಿದಾಗ, ಈಗಾಗಲೇ 72 ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಅಲ್ಲಿದ್ದರೂ ಯಾವುದೇ ಫಲಿತಾಂಶ ಲಭಿಸಿಲ್ಲ ಎಂದ ಪೀಠವು,ಥೈಲಂಡ್‌ನಲ್ಲಿ ಇಂತಹುದೇ ದುರಂತ ಸಂಭವಿಸಿದ್ದಾಗ ಕಿರ್ಲೋಸ್ಕರ್ ಕಂಪನಿಯು ನೆರವಿಗೆ ಮುಂದಾಗಿತ್ತು ಮತ್ತು ಅಲ್ಲಿಯ ಸರಕಾರಕ್ಕೆ ತಾಂತ್ರಿಕ ಬೆಂಬಲವನ್ನೊದಗಿಸಿತ್ತು. ನೀರೆತ್ತುವ ಪಂಪ್‌ಗಳನ್ನು ಅಲ್ಲಿಗೆ ರವಾನಿಸಲಾಗಿತ್ತು ಎಂದು ಅರ್ಜಿದಾರರು ತಿಳಿಸಿದ್ದಾರೆ. ಇಲ್ಲಿಯೂ ಕೂಡ ನೀರೆತ್ತುವ ಪಂಪ್‌ಗಳನ್ನೇಕೆ ಬಳಸಬಾರದು ಎಂದು ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News