ಉ.ಪ್ರ.: ಬೀಡಾಡಿ ಜಾನುವಾರುಗಳಿಗೆ ‘ಗೋವು ಸಂರಕ್ಷಣಾ ಕೇಂದ್ರ’

Update: 2019-01-03 17:05 GMT

ಲಕ್ನೋ, ಜ. 3: ಜಾನುವಾರು ಸೇರಿಂದತೆ ಬೀಡಾಡಿ ಪ್ರಾಣಿಗಳನ್ನು ಜನವರಿ 10ರ ಒಳಗೆ ‘ಗೋವು ಸಂರಕ್ಷಣಾ ಕೇಂದ್ರ’ಗಳಿಗೆ ಸಾಗಿಸಲಾಗುವುದು ಎಂದು ಭರವಸೆ ನೀಡಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಎಲ್ಲ ಜಿಲ್ಲಾ ದಂಡಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ರಾತ್ರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾ ದಂಡಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಬೀಡಾಡಿ ಜಾನುವಾರುಗಳಿಂದ ರೈತರು ಹಾಗೂ ನಿವಾಸಿಗಳು ಸಮಸ್ಯೆ ಎದುರಿಸದಂತೆ ಭರವಸೆ ನೀಡಬೇಕು. ಜಿಲ್ಲೆಯಲ್ಲಿರುವ ಪ್ರತಿ ಗೋಶಾಲೆಗಳಿಗೆ ‘ಗೋವು ಸಂರಕ್ಷಣ ಕೇಂದ್ರ’ ಎಂದು ಮರು ನಾಮಕರಣ ಮಾಡಬೇಕು ಎಂದಿದ್ದಾರೆ. ರಸ್ತೆಗಳಲ್ಲಿ ಜಾನುವಾರುಗಳನ್ನು ಬಿಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಇಂತಹ ಕೇಂದ್ರಗಳಿಗೆ ಜಾನುವಾರುಗಳನ್ನು ಒಯ್ಯಲು ಬರುವವರಲ್ಲಿ ದಂಡ ವಿಧಿಸಬೇಕು ಎಂದು ಹೇಳಿದ್ದಾರೆ. ‘ಗೋ ಸಂರಕ್ಷಣಕ ಕೇಂದ್ರ’ಗಳನ್ನು ನಡೆಸಲು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳ ನೆರವು ಕೋರಿ ಎಂದು ಅವರು ಹೇಳಿದ್ದಾರೆ. ತಮ್ಮ ಬೆಳೆಗಳನ್ನು ಬೀಡಾಡಿ ಜಾನುವಾರುಗಳು ನಾಶ ಮಾಡುತ್ತಿರುವುದನ್ನು ವಿರೋಧಿಸಿ ರೈತರು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವುದರಿಂದ ರಾಜ್ಯ ಸರಕಾರ ಒತ್ತಡಕ್ಕೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News