ಅಕ್ರಮ ಗಣಿಗಾರಿಕೆ ನಿಗ್ರಹಕ್ಕೆ ವಿಫಲ: ಮೇಘಾಲಯ ಸರಕಾರಕ್ಕೆ 100 ಕೋಟಿ ರೂ. ದಂಡ ವಿಧಿಸಿದ ಎನ್‌ ಜಿಟಿ

Update: 2019-01-05 14:28 GMT

ಹೊಸದಿಲ್ಲಿ, ಜ.5: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಗ್ರಹಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮೇಘಾಲಯ ಸರಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) 100 ಕೋಟಿ ರೂ. ದಂಡ ವಿಧಿಸಿದೆ.

ದಂಡದ ಮೊತ್ತವನ್ನು ಎರಡು ತಿಂಗಳೊಳಗೆ ಕೇಂದ್ರ ಪರಿಸರ ನಿಯಂತ್ರಣ ಮಂಡಳಿಯಲ್ಲಿ ಠೇವಣಿ ಇರಿಸುವಂತೆ ಸೂಚಿಸಲಾಗಿದೆ. ಅಲ್ಲದೆ ದಂಡದ ಮೊತ್ತವನ್ನು ಅಕ್ರಮ ಗಣಿಗಳ ಮಾಲಕರಿಂದ ಹಾಗೂ ಅಕ್ರಮವಾಗಿ ಗಣಿ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳಿಂದ ವಸೂಲಿ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿರುವ ಬಹುತೇಕ ಗಣಿಗಳು ಲೀಸ್ ಒಪ್ಪಂದ ಅಥವಾ ಪರವಾನಿಗೆಯಿಲ್ಲದೆ ಕಾರ್ಯಾಚರಿಸುತ್ತಿವೆ ಎಂದು ನ್ಯಾಯಾಧೀಕರಣಕ್ಕೆ ಸಲ್ಲಿಸಲಾಗಿರುವ ಉನ್ನತ ಮಟ್ಟದ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಎನ್‌ ಜಿಟಿ ಅಧ್ಯಕ್ಷ ಎಕೆ ಗೋಯೆಲ್ ನೇತೃತ್ವದ ಪೀಠದೆದುರು ಜನವರಿ 2ರಂದು ಸಲ್ಲಿಸಲಾಗಿದೆ ಎಂದು ಈ ಪ್ರಕರಣದಲ್ಲಿ ಎನ್‌ಜಿಟಿಗೆ ಸಹಾಯ ನೀಡುತ್ತಿರುವ ಹಿರಿಯ ವಕೀಲರು ತಿಳಿಸಿದ್ದಾರೆ.

ಬಹುತೇಕ ಗಣಿಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿರುವುದನ್ನು ವಿಚಾರಣೆ ಸಂದರ್ಭ ಸರಕಾರ ಒಪ್ಪಿಕೊಂಡಿದೆ ಎಂದು ವಕೀಲರು ತಿಳಿಸಿದ್ದಾರೆ. ಮೇಘಾಲಯದಲ್ಲಿರುವ ಸುಮಾರು 24 ಸಾವಿರ ಕಲ್ಲಿದ್ದಲ ಗಣಿಗಳಲ್ಲಿ ಬಹುತೇಕ ಅಕ್ರಮ ಗಣಿಗಳಾಗಿವೆ . ಇವುಗಳಿಗೆ ಪರವಾನಿಗೆ, ಲೀಸ್ ಒಪ್ಪಂದ ಅಥವಾ ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ ಎಂದು ಗುವಾಹಟಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಕೆ ಕಾಕೊಟಿ ನೇತೃತ್ವದ ತ್ರಿಸದಸ್ಯ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ಮೇಘಾಲಯದಲ್ಲಿ ಪರಿಸರ ಮರುಸ್ಥಾಪನೆ ಯೋಜನೆ ಹಾಗೂ ಇತರ ಸಂಬಂಧಿತ ವಿಷಯಗಳ ಮೇಲ್ವಿಚಾರಣೆ ನಡೆಸಲು ಎನ್‌ಜಿಟಿ 2018ರ ಆಗಸ್ಟ್‌ನಲ್ಲಿ ಸಮಿತಿಯೊಂದನ್ನು ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News